ಶಿರಾಳಕೊಪ್ಪ (ಶಿವಮೊಗ್ಗ): ಕನ್ನಡದ ಪ್ರಥಮ ಶಾಸನ ಎಂದೇ ಪ್ರಚಲಿತವಾಗಿರುವ ಹಲ್ಮಿಡಿ ಶಾಸನಕ್ಕಿಂತಲೂ ಪ್ರಾಚೀನ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ ಪತ್ತೆಯಾಗಿದೆ.
‘ಪತ್ತೆಯಾಗಿರುವ ಈ ಶಿಲಾ ಶಾಸನದಲ್ಲಿ ಕೆಲ ಕನ್ನಡ ಪದಗಳನ್ನು ಗುರುತಿಸಲಾಗಿದ್ದು, ಹೆಚ್ಚಿನ ಅಧ್ಯಯನ ನಡೆಯುತ್ತಿದೆ’ ಎಂದು ಭಾರತೀಯ ಪುರಾತತ್ವ ಇಲಾಖೆಯ ರಾಜ್ಯ ಉಪ ನಿರೀಕ್ಷಕ ಕೇಶವ ಶರ್ಮ ಮಾಹಿತಿ ನೀಡಿದರು.
ಕದಂಬ ಸಾಮ್ರಾಜ್ಯ ಸ್ಥಾಪಕ ಮಯೂರ ವರ್ಮನ ನೆಲೆಬೀಡಾಗಿದ್ದ ತಾಳಗುಂದದ ಗರ್ಭದಲ್ಲಿ ಹುದುಗಿರುವ ಇತಿಹಾಸದ ಮೇಲೆ ಇನ್ನಷ್ಟು ಬೆಳಕು ಚೆಲ್ಲಲು ಹಲವು ತಿಂಗಳಿಂದ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಉತ್ಖನನ ಕಾರ್ಯ ಕೈಗೊಂಡಿತ್ತು.
ಮೊದಲ ಬಾರಿ ನಡೆದ ಪ್ರಾಯೋಗಿಕ ಉತ್ಖನನದಲ್ಲಿ ಇಲ್ಲಿನ ಪ್ರಣವ ಲಿಂಗೇಶ್ವರ ದೇವಾಲಯದ ಈಶಾನ್ಯ ಭಾಗದಲ್ಲಿ 2 ಜತೆ ತಾಮ್ರದ ಶಾಸನ ಹಾಗೂ 4 ಗ್ರಾಂ ತೂಕದ 13 ಚಿನ್ನದ ನಾಣ್ಯಗಳು ದೊರಕಿದ್ದವು. ಈ ನಾಣ್ಯಗಳು ಕ್ರಿ.ಶ. 605 ರಿಂದ 635ರವರೆಗೆ ತಾಳಗುಂದವನ್ನು ಆಳಿದ ಭೂವಿಕ್ರಮನದು ಎಂದು ಗುರುತಿಸಲಾಗಿದೆ.
ಇದರಲ್ಲಿ ಆನೆ ಹಾಗೂ ಗಂಗ ಅರಸರ ಚಿತ್ರಗಳನ್ನು ಕಾಣಬಹುದಾಗಿದೆ. ತಾಮ್ರದ ಶಾಸನಗಳು ಕ್ರಿ.ಶ. 1180ರ ಖಳಚೂರಿ ಸಂಕಮನದು ಎನ್ನಲಾಗಿದೆ. ಇದರಿಂದ ಇನ್ನಷ್ಟು ಉತ್ತೇಜಿತರಾದ ಪುರಾತತ್ವ ಇಲಾಖೆ ಅಧಿಕಾರಿಗಳು ಎರಡನೇ ಬಾರಿಗೆ ಉತ್ಖನನ ಕಾರ್ಯಕ್ಕೆ ಕೈ ಹಾಕಿದ್ದು ಸಾಕಷ್ಟು ಉಪಯುಕ್ತ ಮಾಹಿತಿ ಲಭ್ಯವಾಗಿದೆ.
ಕಲ್ಲಿನ ಶಾಸನದ ಜತೆ ಈಗ ಪತ್ತೆಯಾಗಿರುವ ಮುಖಮಂಟಪದ ಬಳಿಯ ಸಿಂಹ ಖಟಾಂಜನವು ಇತಿಹಾಸ ಅಧ್ಯಯನದ ಬಹುಮುಖ್ಯ ಭಾಗ ಎಂದು ಗುರುತಿಸಲಾಗಿದೆ.
ಉತ್ಖನನ ಕಾರ್ಯದಲ್ಲಿ 6 ಬಗೆಯ ಹೆಂಚುಗಳು ಲಭ್ಯವಾಗಿದ್ದು, 40x20x8 ಹಾಗೂ 20x20x8 ಸೆ.ಮೀ. ಅಳತೆಯ ಇಟ್ಟಿಗೆಗಳು ಸಹ ದೊರಕಿವೆ.
‘ಶಾತವಾಹನರ ಕಾಲದಿಂದ ಈ ಸ್ಥಳ ಅಗ್ರಹಾರವಾಗಿತ್ತು. ನಂತರ ಕದಂಬರ ಕಾಲದಲ್ಲಿ ಉನ್ನತ ಸ್ಥಿತಿಗೆ ತಲುಪಿತ್ತು. ಎರಡನೇ ಉತ್ಖನನ ಕಾರ್ಯದಲ್ಲಿ ಹಲವು ಉಪ ಕಟ್ಟಡಗಳು ಕಾಣುತ್ತಿದ್ದು, ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ’ ಎಂದು ಶರ್ಮ ತಿಳಿಸಿದರು.
ಪ್ರಾಯೋಗಿಕ ಉತ್ಖನನ ಕಾರ್ಯ ಭಾರತೀಯ ಪುರಾತತ್ವ ಇಲಾಖೆಯ ರಾಜ್ಯ ಅಧೀಕ್ಷಕ ಡಾ.ನಂಬಿರಾಜನ್ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
–ಎಂ.ನವೀನ್ ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.