ADVERTISEMENT

ಹಲ್ಲೆ ಘಟನೆ: 20 ಅಧಿಕಾರಿಗಳಿಗೆ ನೋಟಿಸ್

ಬಸವರಾಜ ಹವಾಲ್ದಾರ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST
ಹಲ್ಲೆ ಘಟನೆ: 20 ಅಧಿಕಾರಿಗಳಿಗೆ ನೋಟಿಸ್
ಹಲ್ಲೆ ಘಟನೆ: 20 ಅಧಿಕಾರಿಗಳಿಗೆ ನೋಟಿಸ್   

ಬೆಳಗಾವಿ:  ಸುವರ್ಣಸೌಧ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ನಡೆದಿದ್ದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ 20 ಅಧಿಕಾರಿಗಳಿಗೆ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಈ ಕುರಿತು ಈಗಾಗಲೇ ಬೆಳಗಾವಿ ಗ್ರಾಮೀಣ ಉಪವಿಭಾಗದ ಡಿವೈಎಸ್‌ಪಿ ಅಶ್ವಿನಿ ನೋಟಿಸ್ ನೀಡಿದ್ದು, ಜೂನ್ 8 ರಂದು ಬೆಳಿಗ್ಗೆ 10.30ಕ್ಕೆ ಪೊಲೀಸ್ ಠಾಣೆಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಪ್ರಸಾದ ಅವರ ಮೇಲೆ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿನಾಯಕ ಸೂಗೂರ  ನಡೆಸಿದ ಹಲ್ಲೆಯ ಕುರಿತು ವಿಚಾರಣೆ ನಡೆಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಹಲ್ಲೆ ನಡೆಸಿದ್ದನ್ನು ಖಂಡಿಸಿ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಪೊಲೀಸ್ ಠಾಣೆಗೆ ದೂರು ನೀಡಲೂ ಯೋಜಿಸಲಾಗಿತ್ತು. ಆದರೆ ನಂತರ ಸಂಧಾನ ನಡೆಸಿ ಪ್ರಕರಣಕ್ಕೆ ತೆರೆ ಎಳೆಯುವ ಯತ್ನ ಮಾಡಲಾಗಿತ್ತು.

ಆದರೆ ಕೆಲವರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದ ಮನವಿ ಪತ್ರದ ಒಂದು ಪ್ರತಿಯನ್ನು ಮಾನವ ಹಕ್ಕುಗಳ ಆಯೋಗಕ್ಕೂ ಕಳುಹಿಸಿದ್ದಾರೆ. ಆಯೋಗವು ಪ್ರಕರಣ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಲಾಗಿದೆ ಎನ್ನುತ್ತಾರೆ ಡಿವೈಎಸ್‌ಪಿ ಅಶ್ವಿನಿ.

`ಹಲ್ಲೆ ನಡೆದಾಗ ಅಲ್ಲಿದ್ದದ್ದು ಬೆರಳೆಣಿಕೆಯಷ್ಟು ಜನರು ಮಾತ್ರ. ಆದರೆ ಈಗ ವಿಚಾರಣೆಗಾಗಿ 20 ಅಧಿಕಾರಿಗಳನ್ನು ಕರೆದಿರುವುದು ಏಕೆ~ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.
`ಘಟನೆ ನಡೆದಾಗ ನಾನು ಕಚೇರಿಯಲ್ಲಿಯೇ ಇರಲಿಲ್ಲ. ಆದರೂ ಘಟನೆ ಕುರಿತಂತೆ ವಿವರ ನೀಡಲು ನನ್ನನ್ನು ಠಾಣೆಗೆ ಬರುವಂತೆ ಸೂಚಿಸಲಾಗಿದೆ. ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದ ಮೇಲೆ ಹೇಳುವುದೇನು?

ವಿಚಾರಣೆಯ ದಾರಿ ತಪ್ಪಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ~ ಎಂದು ಅವರು ಆರೋಪಿಸುತ್ತಾರೆ.
`ಬುಧವಾರ ನಡೆಸಲಿರುವ ವಿಚಾರಣೆಗೆ ಹಾಜರಾಗುವುದೇ, ಬೇಡವೇ ಎಂಬ ಬಗೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನಾಳೆ ಬೆಳಿಗ್ಗೆ ನಿರ್ಧರಿಸಲಾಗುವುದು~ ಎನ್ನುತ್ತಾರೆ ಎಂಜಿನಿಯರ್‌ಗಳ ಸಂಘದ ಗೌರವಾಧ್ಯಕ್ಷ ಎಸ್. ಹೂಗಾರ.

`ಘಟನೆ ಕುರಿತು ಸೂಪರಿಂಟೆಂಡಿಂಗ್ ಎಂಜಿನಿಯರ್ ವಿಷಾದ ವ್ಯಕ್ತಪಡಿಸಿರುವುದರಿಂದ ಅದೊಂದು ಮುಗಿದ ಅಧ್ಯಾಯ. ದೂರು ನೀಡ     ದಿದ್ದರೂ ಏಕೆ ವಿಚಾರಣೆಗೆ ಕರೆಯುತ್ತಿದ್ದಾರೆ ಎಂಬುದು ನಮಗೂ ಗೊತ್ತಾಗಿಲ್ಲ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಹಲ್ಲೆ ಘಟನೆ ಮುಗಿದ ಅಧ್ಯಾಯ ಎನ್ನುತ್ತಿರುವಾಗಲೇ ಪೊಲೀಸ್ ಇಲಾಖೆ ವಿಚಾರಣೆ ಆರಂಭಿಸಿರುವುದರಿಂದ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.