ADVERTISEMENT

ಹಳ್ಳಿಗಳಿಗೆ ತ್ರೀ ಫೇಸ್ ವಿದ್ಯುತ್: ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 6:45 IST
Last Updated 8 ಜನವರಿ 2011, 6:45 IST

ಶಿವಮೊಗ್ಗ: ಗ್ರಾಮೀಣ ಪ್ರದೇಶದಲ್ಲಿ ರೈತರ ಅನುಕೂಲಕ್ಕೆ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ದಿನಕ್ಕೆ ಹಗಲು ಕನಿಷ್ಠ 6 ಗಂಟೆ  ನಿರಂತರ ತ್ರೀ ಫೇಸ್ ವಿದ್ಯುತ್ ಪೂರೈಸಲು ಸರ್ಕಾರ ನಿರ್ಧರಿಸಿದೆ ಎಂದು ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ರಾಯಚೂರು, ಬಳ್ಳಾರಿ, ಉಡುಪಿ ಘಟಕಗಳಲ್ಲಿ ನಿರೀಕ್ಷಿತ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಗರಿಷ್ಠ ಪ್ರಮಾಣದ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜತೆಗೆ ಸಾಕಷ್ಟು ಪ್ರಮಾಣದ ವಿದ್ಯುತ್ ಖರೀದಿಸಲಾಗುತ್ತಿದೆ. ಹಾಗಾಗಿ, ಗ್ರಾಮೀಣ ಪ್ರದೇಶದಲ್ಲಷ್ಟೇ ಅಲ್ಲ, ನಗರ ಪ್ರದೇಶಗಳಲ್ಲೂ ಸರ್ಕಾರ ನಿರಂತರ ಗುಣಮಟ್ಟದ ವಿದ್ಯುತ್ ನೀಡಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.

ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದ ರೀತಿಯಲ್ಲಿ ಸಂಜೆ 6ರಿಂದ ಮುಂಜಾನೆ 6ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲು ಸರ್ಕಾರ ಬದ್ಧವಾಗಿದೆ.

ಹಾಗೆಯೇ, ಗ್ರಾಮೀಣ ಪ್ರದೇಶದಲ್ಲಿ ರೈತರ ಅನುಕೂಲಕ್ಕಾಗಿ ರಾತ್ರಿ ಕೂಡ ತ್ರೀ ಫೇಸ್ ವಿದ್ಯುತ್ ಪೂರೈಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ದರ ಏರಿಕೆ ಸಮರ್ಥನೆ: ವಿದ್ಯುತ್ ದರ ಏರಿಕೆ ಸಮರ್ಥಿಸಿಕೊಂಡ ಅವರು, ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪೆನಿಗಳ ಮೇಲೆ 5ಸಾವಿರ ಕೋಟಿ ರೂ. ಸಾಲದ ಹೊರೆ ಇದೆ.

ಹಾಗಾಗಿ, ದರ ಏರಿಕೆ ಅನಿವಾರ್ಯ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌ಗೆ 75 ಪೈಸೆ ಹೆಚ್ಚಿಸಲು ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಸರ್ಕಾರ ಕೇವಲ 30 ಪೈಸೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.