ADVERTISEMENT

ಹಾಲಪ್ಪ ಪ್ರಕರಣಕ್ಕೆ ಸುಖಾಂತ್ಯ ಕಾಣಿಸುವ ಯತ್ನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 15:25 IST
Last Updated 24 ಫೆಬ್ರುವರಿ 2011, 15:25 IST

ಶಿವಮೊಗ್ಗ: ಮಾಜಿ ಸಚಿವ ಹಾಲಪ್ಪ ಹಾಗೂ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಚಂದ್ರಾವತಿ ಅವರ ಪತಿ ವೆಂಕಟೇಶಮೂರ್ತಿ ಮಧ್ಯೆ ರಾಜಿ ಸೂತ್ರ ನಡೆದಿದೆ ಎಂಬ ಮಾತುಗಳು ದಟ್ಟವಾಗಿವೆ.

ರಾಜಿ ಸೂತ್ರದ ಮೊದಲ ಹಂತವಾಗಿ ವೆಂಕಟೇಶಮೂರ್ತಿ ವಿರುದ್ಧ ಮೊದಲ ಪತ್ನಿ ಸುಮಿತ್ರಾ ತಾವು ಸಲ್ಲಿಸಿದ್ದ ದೂರನ್ನು ಹಿಂಪಡೆದಿದ್ದಾರೆ. ಶಿವಮೊಗ್ಗದ ಎರಡನೇ ಜೆಎಂಎಫ್‌ಸಿಯಲ್ಲಿ ವೆಂಕಟೇಶಮೂರ್ತಿ ವಿರುದ್ಧ ಸಲ್ಲಿಸಿದ್ದ ದೂರು ಬುಧವಾರ ಖುಲಾಸೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಸ್ತುತ ತವರು ಮನೆಯಲ್ಲಿ ಚಿಕ್ಕ ಮಗನೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ವಾಸವಾಗಿರುವ ಸುಮಿತ್ರಾ 2010ರ ಮೇ 11ರಂದು ವೆಂಕಟೇಶಮೂರ್ತಿ ವಿರುದ್ಧ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಹಾಗೂ ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ವೆಂಕಟೇಶಮೂರ್ತಿಯಿಂದ ತಮಗೆ ಜೀವಬೆದರಿಕೆ ಇದೆ ಎಂದೂ ದೂರು ಸಲ್ಲಿಸಿದ್ದರು.

ತದನಂತರ ಶಿವಮೊಗ್ಗದ ಎರಡನೇ ಜೆಎಂಎಫ್‌ಸಿಯಲ್ಲಿ ‘ವಿಚ್ಛೇದನ ನೀಡದೆ, ನನಗೆ ಗೊತ್ತಿಲ್ಲದಂತೆ ಮತ್ತೊಂದು ಮದುವೆಯಾದ ವೆಂಕಟೇಶಮೂರ್ತಿ ವಿರುದ್ಧ ಐಪಿಸಿ ಸೆಕ್ಷನ್ 494ರ ಅಡಿ ಶಿಕ್ಷೆ ವಿಧಿಸಬೇಕು’ ಎಂಬುದು ಸುಮಿತ್ರಾ ಅವರ ದೂರಿನ ಸಾರಾಂಶವಾಗಿತ್ತು. ಪ್ರಕರಣದ ವಿಚಾರಣೆ ನಡೆದಲ್ಲಿ ವೆಂಕಟೇಶಮೂರ್ತಿಗೆ ಶಿಕ್ಷೆಯಾಗುವ ಸಾಧ್ಯತೆಗಳಿದ್ದವು. ಆದರೆ, ತೀರ್ಪು ಹೊರಬರುವ ಮುನ್ನವೇ ಸುಮಿತ್ರಾ ದೂರನ್ನು ಹಿಂಪಡೆದಿದ್ದಾರೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸುಮಿತ್ರಾ ಅವರು ದೂರು ಹಿಂಪಡೆಯುವಲ್ಲಿ ಹಾಲಪ್ಪ ಅವರ ಪ್ರಭಾವವಿದೆ ಎಂದು ಮೂಲಗಳು ದೃಢಪಡಿಸಿವೆ. ಹಿಂದೆಯೂ ಸ್ಥಳೀಯ ಬಿಜೆಪಿ ಮುಖಂಡರ ಪ್ರಚೋದನೆಯಿಂದಾಗಿಯೇ ವೆಂಕಟೇಶಮೂರ್ತಿ ದೂರು ದಾಖಲಿಸಿದ್ದರು ಎಂಬುದು ಇಂದು ಗೌಪ್ಯವಾಗಿ ಉಳಿದಿಲ್ಲ.

ಇತ್ತೀಚೆಗಷ್ಟೇ ಮಾನವ ಹಕ್ಕು ಆಯೋಗ, ಹಾಲಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ಏಕೆ ವಹಿಸಬಾರದು ಎಂಬುದಾಗಿ ಸರ್ಕಾರಕ್ಕೆ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಹಾಲಪ್ಪ ತರಾತುರಿಯಲ್ಲಿ ವೆಂಕಟೇಶಮೂರ್ತಿ ಜತೆ ರಾಜಿಯಾಗಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸಿಐಡಿ ಪ್ರಕರಣದ ತನಿಖೆಯನ್ನು ನಡೆಸಿದ್ದು, ಹಾಲಪ್ಪ-ಚಂದ್ರಾವತಿ ಜತೆಗಿದ್ದುದರ ಕುರಿತು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದೆ. ಅಲ್ಲದೇ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಲಪ್ಪರಿಗೆ ವಿರುದ್ಧವಾಗಿವೆ.

ಈ ನಡುವೆ ಸರ್ಕಾರದ ಒತ್ತಡವೂ ಇರುವುದರಿಂದ ಸಿಐಡಿ ಇದುವರೆಗೂ ಆರೋಪಪಟ್ಟಿ ಸಲ್ಲಿಸಿಲ್ಲ ಎಂಬ ಮಾಹಿತಿಗಳಿವೆ. ಹಾಲಪ್ಪ ಹಾಗೂ ವೆಂಕಟೇಶಮೂರ್ತಿ ರಾಜಿ ಮಾಡಿಕೊಂಡರೂ ಈ ಹಂತದಲ್ಲಿ ಚಂದ್ರಾವತಿ ದೂರನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ತನಿಖೆ ನಡೆಸಿರುವ ಸಿಐಡಿ, ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದಲ್ಲಿ ಮಾತ್ರ ಪ್ರಕರಣ ಅಂತ್ಯ ಕಾಣುವುದು.

ಒಂದು ವೇಳೆ ಸಿಐಡಿ ಆರೋಪಪಟ್ಟಿ ಸಲ್ಲಿಸಿದರೂ ಚಂದ್ರಾವತಿ ನ್ಯಾಯಾಲಯದಲ್ಲಿ ಸರಿಯಾದ ಮಾಹಿತಿ ನೀಡದಿದ್ದರೆ ಪ್ರಕರಣ ಖುಲಾಸೆ ಆಗುತ್ತದೆ. ಇವೆಲ್ಲವನ್ನೂ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿಯೇ ರಾಜಿಸೂತ್ರಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಿಐಡಿ ಯಾವ ಸಂದರ್ಭದಲ್ಲಿಯೂ ಚಾರ್ಚ್‌ಶೀಟ್ ಸಲ್ಲಿಸಬಹುದು. ಬೇಕಾದರೆ ಬಿ ರಿಪೋರ್ಟ್ ಸಲ್ಲಿಸಬಹುದು. ನಂತರವಷ್ಟೇ ಮುಂದಿನ ಕ್ರಮ’ ಎನ್ನುತ್ತಾರೆ ಹಾಲಪ್ಪ ಪರ ವಕೀಲ ಅಶೋಕ್ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.