ADVERTISEMENT

ಹಾಲು ಉತ್ಪಾದನೆ ಏರಿಕೆಗೆ ಆಸ್ಟ್ರೇಲಿಯಾ ಗೂಳಿ ಕಾರಣವೇ?

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಬೆಂಗಳೂರು:  ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಲು ಕಾರಣ ಏನು? ಈ ಪ್ರಶ್ನೆ ವಿಧಾನಸಭೆಯಲ್ಲಿ ಶುಕ್ರವಾರ ಸ್ವಾರಸ್ಯಕರ ಚರ್ಚೆಗೆ ಗ್ರಾಸ ನೀಡಿತು.ಬರ ಕುರಿತ ಚರ್ಚೆ ಸಂದರ್ಭದಲ್ಲಿ ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರು ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ದುಃಸ್ಥಿತಿ ಕುರಿತು ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

`ಪ್ರತಿನಿತ್ಯ 52 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿರುವುದಾಗಿ ಹೇಳುವ ಕೆ.ಎಂ.ಎಫ್, ಸುಮಾರು 9000 ಟನ್ ಹಾಲಿನ ಪುಡಿಯನ್ನು ಮಾರಾಟ ಮಾಡದೆ ದಾಸ್ತಾನು ಇಟ್ಟಿದೆ. ಇದರಿಂದ ರೂ 140 ಕೋಟಿ  ನಷ್ಟ ಆಗಿದೆ. ಹಾಲು ಉತ್ಪಾದಕರಿಗೆ ಏಳೆಂಟು ವಾರಗಳಿಂದ ಬಟವಾಡೆ ಮಾಡಿಲ್ಲ. ಹಾಲು ಮಾರಾಟದಿಂದಲೇ ಜೀವನ ನಡೆಸುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ~ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಮಧ್ಯ ಪ್ರವೇಶಿಸಿದರು. `ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಾನು ರಾಜ್ಯದಲ್ಲಿ ಪಶುಸಂಗೋಪನೆ ಸಚಿವನಾಗಿದ್ದೆ. ಆಗ ಆಸ್ಟ್ರೇಲಿಯಾದಿಂದ ಗೂಳಿಗಳನ್ನು ತರಿಸಲಾಗಿತ್ತು. ಅವುಗಳ ಫಲವೇ ಇವತ್ತು ಹಾಲಿನ ಉತ್ಪಾದನೆ ಹೆಚ್ಚಾಗಲು ಕಾರಣ~ ಎಂದು ಹೇಳುತ್ತಿದ್ದಂತೆ ಸದನ ನಗೆಗಡಲಲ್ಲಿ ತೇಲಿತು.

ತಕ್ಷಣ ರೇವಣ್ಣ ಪ್ರತಿಕ್ರಿಯೆ ನೀಡಿ, `ಹಾಲು ಉತ್ಪಾದನೆ ಹೆಚ್ಚಲು ಕಾರಣ ಏನು ಎನ್ನುವುದನ್ನು ಬಿಜೆಪಿಯವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ~ ಎಂದು ಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.