ADVERTISEMENT

ಹಾಸ್ಟೆಲ್‌ ಆಹಾರಕ್ಕೆ ಟೆಂಡರ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ಸುವರ್ಣಸೌಧ (ಬೆಳಗಾವಿ): ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ­ನಿರ್ವಹಿಸುವ ವಿದ್ಯಾರ್ಥಿನಿಲಯ­ಗಳು, ವಸತಿ ಶಾಲೆಗಳು ಮತ್ತು ಆಶ್ರಮ ಶಾಲೆಗಳಿಗೆ ಆಹಾರ ಪದಾರ್ಥ­ಗಳನ್ನು ಪೂರೈಸುವ ಟೆಂಡರ್‌ ಪ್ರಕ್ರಿಯೆಯನ್ನು ರಾಜ್ಯ­ಮಟ್ಟ­ದಲ್ಲೇ ಅಂತಿಮಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.

ಬಿಜೆಪಿಯ ರಾಮಚಂದ್ರ ಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ‘ಹಿಂದೆ ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಅಂತಿಮಗೊಳ್ಳುತ್ತಿತ್ತು. ಆಗ, ಅಲ್ಲಿನ ಅಧಿಕಾರಿಗಳು ರಾಜ­ಕಾರಣಿ­ಗಳ ಪ್ರಭಾವಕ್ಕೆ ಮಣಿದು ಅರ್ಹತೆಗಳು ಇಲ್ಲದವರಿಗೂ ಟೆಂಡರ್‌ ನೀಡುತ್ತಿದ್ದರು. ಇಂತಹ ಅಕ್ರಮಗಳನ್ನು ತಡೆಯಲು ಈ ಬದಲಾವಣೆ ಮಾಡಲಾಗಿದೆ’ ಎಂದರು.

ಈಗಲೂ ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ಪ್ರಕ್ರಿಯೆ ನಡೆಯುತ್ತದೆ. ಆದರೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಟೆಂಡರ್‌ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಾರೆ. ಆಹಾರ ಪದಾರ್ಥ ಪೂರೈಸುವ ಆರ್ಥಿಕ ಶಕ್ತಿ ಬಿಡ್‌ದಾರರಿಗೆ ಇರಬೇಕು. ಅವರು ಟೆಂಡರ್‌ ಪಡೆದ ಬಳಿಕ ಕನಿಷ್ಠ ಎರಡು ತಿಂಗಳಿಗೆ ಸಾಕಾಗುವಷ್ಟು ಆಹಾರ ಪದಾರ್ಥವನ್ನು ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ದಾಸ್ತಾನು ಇಡಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.