ADVERTISEMENT

ಹಿಂಗಾರು:ರಾಜ್ಯ ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ನವದೆಹಲಿ:`ಮುಂಗಾರು ವೈಫಲ್ಯದಿಂದ ಬರಗಾಲದ ದವಡೆಗೆ ಸಿಕ್ಕಿರುವ ರಾಜ್ಯದಲ್ಲಿ ಹಿಂಗಾರೂ ಕೈಕೊಡುವ ಸೂಚನೆ ದಟ್ಟವಾಗಿದ್ದು, ಆತಂಕ ತಲೆದೋರಿದೆ. ಈ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ~ ಎಂದು ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಹೇಳಿದರು.

ರವಿಶಂಕರ್ ಗುರೂಜಿ ಅವರ `ವಿಕಾಸ್ ಕಿ ಪಥ್~ (ಪ್ರಗತಿ ಹಾದಿಯಲ್ಲಿ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಶನಿವಾರ ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ, ಮಳೆ ಕೈಕೊಟ್ಟಿರುವುದರಿಂದ ವ್ಯಾಪಕವಾಗಿ ಬೆಳೆ ಹಾಳಾಗಿದ್ದು, ಕುಡಿಯುವ ನೀರು ಮತ್ತು ಮೇವು ಅಭಾವ ತಲೆದೋರಿದೆ.

ಹಿಂಗಾರು ಬಿತ್ತನೆಗೆ ಬೀಜ, ಗೊಬ್ಬರದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ರಾಜ್ಯದಲ್ಲಿ ಹಿಂಗಾರು ಮಳೆಯೂ ಕೈಕೊಡುವ ಲಕ್ಷಣಗಳಿವೆ.  ಈ ತುರ್ತು  ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ಪರಿಹಾರ ಕೆಲಸಗಳಿಗೆ ಅಗತ್ಯವಾದ ಹಣಕಾಸು ಬಿಡುಗಡೆ ಮಾಡಿದ್ದು, ಬಳಿಕ ಕೇಂದ್ರಕ್ಕೆ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ. ಯಾವ ಜಿಲ್ಲೆಯಲ್ಲೂ ಹಣಕಾಸಿನ ಕೊರತೆ ಆಗಿಲ್ಲ ಎಂದು ಖಚಿತಪಡಿಸಿದರು.

`ಮಳೆ ಅಭಾವದಿಂದ ಭಾರಿ ಬೆಳೆ ನಷ್ಟವಾಗಿದೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 450 ಕೋಟಿಯಷ್ಟು ಬೆಳೆ ಒಣಗಿದೆ. ಒಟ್ಟು ಬೆಳೆ ನಷ್ಟದ ಅಂದಾಜು ಮಾಡಲಾಗುತ್ತಿದೆ. ನಾನೂ ಖುದ್ದು ಏಳೆಂಟು ಜಿಲ್ಲೆಗಳಲ್ಲಿ  ಪ್ರವಾಸ ಮಾಡಿ ಪರಿಸ್ಥಿತಿ ಅವಲೋಕಿಸಿದ್ದೇನೆ.

ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತದ ಜತೆ ಕೃಷಿ, ತೋಟಗಾರಿಕೆ, ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಕೈ ಜೋಡಿಸಿವೆ ಎಂದು ಸ್ಪಷ್ಟಪಡಿಸಿದರು.

`ಆರ್ಥಿಕಕವಾಗಿ ಲಾಭದಾಯಕವಲ್ಲ~ ಎಂಬ ಕಾರಣದಿಂದ ಮುಚ್ಚಲಾಗಿದ್ದ ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿ ಪುನಶ್ಚೇತನದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.