ADVERTISEMENT

`ಹಿಂಡಿ ಅಕ್ರಮ ಸಿಬಿಐಗೆ ಒಪ್ಪಿಸಿ'

ಕೆಎಂಎಫ್: ಖರೀದಿಯಲ್ಲಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಕೆಎಂಎಫ್ ಕೇಂದ್ರ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆ	- ಪ್ರಜಾವಾಣಿ ಚಿತ್ರ
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಕೆಎಂಎಫ್ ಕೇಂದ್ರ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಹತ್ತಿ ಹಿಂಡಿ ಖರೀದಿಯಲ್ಲಿ ಆಗಿರುವ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಹಾಲು ಉತ್ಪಾದಕ ರೈತರ ಹೋರಾಟ ಸಮಿತಿ ಸದಸ್ಯರು ನಗರದ ಹೊಸೂರು ರಸ್ತೆಯಲ್ಲಿರುವ ಕರ್ನಾಟಕ ಹಾಲು ಮಹಾಮಂಡಳದ (ಎಎಂಎಫ್) ಕೇಂದ್ರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

`ಎಣ್ಣೆ ರಹಿತ ಹತ್ತಿ ಹಿಂಡಿ' ಖರೀದಿಯಲ್ಲಿ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಮತ್ತು ಆರು ಮಂದಿ ಅಧಿಕಾರಿಗಳು ನಲವತ್ತು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಸೇವೆಯಿಂದ ವಜಾ ಮಾಡಬೇಕು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, `ರಾಜ್ಯದಲ್ಲಿ  24 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಸಹಕಾರಿ ವ್ಯಾಪ್ತಿಯ ಹೈನುಗಾರಿಕೆಯಲ್ಲಿ ತೊಡಗಿವೆ. ರಾಜ್ಯದಲ್ಲಿ ಪ್ರತಿದಿನ 53.5 ಲಕ್ಷ ಲೀಟರ್‌ಗೂ ಅಧಿಕ ಹಾಲು ಉತ್ಪಾದನೆ ಆಗುತ್ತಿದೆ. ಆದರೆ, ಹಾಲನ್ನು ಸಮರ್ಪಕವಾಗಿ ಮಾರಾಟ ಮಾಡುವಲ್ಲಿ ಕೆಎಂಎಫ್ ವಿಫಲವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಪಶು ಆಹಾರ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವ ಕೆಎಂಎಫ್, ಹಾಲಿನ ಬೆಲೆಯನ್ನು ಮಾತ್ರ ಹೆಚ್ಚಿಸುತ್ತಿಲ್ಲ. ಫೆಬ್ರುವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಹತ್ತಿ ಹಿಂಡಿ ಬೆಲೆ ಪ್ರತಿ ಟನ್‌ಗೆ 13 ಸಾವಿರ ರೂಪಾಯಿ ಇತ್ತು. ಆದರೆ, ಸಂಸ್ಥೆ ಆಗ ಹತ್ತಿ ಹಿಂಡಿ ಖರೀದಿ ಮಾಡಲಿಲ್ಲ.

ಜುಲೈ ತಿಂಗಳಲ್ಲಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಹತ್ತಿ ಹಿಂಡಿ ಬೆಲೆ ಟನ್‌ಗೆ 29 ಸಾವಿರ ರೂಪಾಯಿಗೆ ನಿಗದಿಪಡಿಸಲಾಯಿತು. ಈ ಟೆಂಡರ್‌ನಲ್ಲಿ ಹಿಂಡಿಯನ್ನು ಖರೀದಿ ಮಾಡುವ ಮೂಲಕ ಸಂಸ್ಥೆ, 29.75 ಕೋಟಿ ರೂಪಾಯಿಗೆ ಸಿಗುತ್ತಿದ್ದ ಹಿಂಡಿಗೆ 68 ಕೋಟಿ ರೂಪಾಯಿ ಭರಿಸಿದೆ.

ಈ ಅವೈಜ್ಞಾನಿಕ ನೀತಿಯಿಂದ ಸಂಸ್ಥೆಗೆ ನಲವತ್ತು ಕೋಟಿ ರೂಪಾಯಿ ನಷ್ಟವಾಗಿದೆ. ಈ ನಷ್ಟವನ್ನು ತುಂಬಲು ಪಶು ಆಹಾರದ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಿರುವುದು ಖಂಡನೀಯ' ಎಂದರು.ಕೆಎಂಎಫ್ ನಿರ್ದೇಶಕ ಸಿ.ನಾಗರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.