ADVERTISEMENT

ಹಿಂಬಾಗಿಲಿನಿಂದ ಅಧಿಕಾರ; ಕಾಂಗ್ರೆಸ್‌ ತಂತ್ರ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 15:23 IST
Last Updated 29 ಮೇ 2018, 15:23 IST
ಹಿಂಬಾಗಿಲಿನಿಂದ ಅಧಿಕಾರ; ಕಾಂಗ್ರೆಸ್‌ ತಂತ್ರ: ಶೋಭಾ ಕರಂದ್ಲಾಜೆ
ಹಿಂಬಾಗಿಲಿನಿಂದ ಅಧಿಕಾರ; ಕಾಂಗ್ರೆಸ್‌ ತಂತ್ರ: ಶೋಭಾ ಕರಂದ್ಲಾಜೆ   

ಚಿಕ್ಕಮಗಳೂರು: ‘ಕಾಂಗ್ರೆಸ್‌ ಪಕ್ಷವು ಜನಮತಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಕೆಲಸ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಕುಟುಕಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ಗೆ ಜನಾದೇಶ ಸಿಕ್ಕಿಲ್ಲ. ಕಾಂಗ್ರೆಸ್‌ನ ಐದು ವರ್ಷದ ದುರಾಡಳಿತ ಮತ್ತು ಕೋಮುವಾದಿ ರಾಜಕಾರಣಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ ಶಾಸಕರ ಸಂಖ್ಯೆ 130ರಿಂದ 78ಕ್ಕೆ ಇಳಿದಿದೆ. ಅದು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಿತ್ತು’ ಎಂದು ಪ್ರತಿಪಾದಿಸಿದರು. 

‘ಅವಕಾಶವಾದಿ ರಾಜಕಾರಣಕ್ಕೆ ರಾಜ್ಯದಲ್ಲಿ ಮತ್ತೆ ದಾರಿಯಾಗಿದೆ. ಜೆಡಿಎಸ್‌ ಶಾಸಕರ ಸಂಖ್ಯೆ 48ರಿಂದ 38ಕ್ಕೆ ಇಳಿದಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣಕ್ಕೆ ಈ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ’ ಎಂದು ಟೀಕಿಸಿದರು.

ADVERTISEMENT

‘2004ರಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ ಪಕ್ಷವು ಧರಂಸಿಂಗ್‌ ಅವರಿಗೆ ಕೈಕೊಟ್ಟು ಬಿಜೆಪಿ ಬಾಗಿಲಿಗೆ ಬಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮತ್ತೆ ಮೈತ್ರಿ ಮಾಡಿಕೊಂಡಿವೆ. ಸಚಿವ ಸಂಪುಟ ರಚನೆಗೆ ಮುನ್ನವೇ ಎರಡೂ ಪಕ್ಷಗಳಲ್ಲಿ ಈಗ ಕಚ್ಚಾಟ ಶುರುವಾಗಿದೆ. ಈ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂದು ಹೇಳಲಾಗದು’ ಎಂದು ಲೇವಡಿ ಮಾಡಿದರು.

‘ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲಿ ಖಾತೆಗಾಗಿ ಕಿತ್ತಾಟ ಆರಂಭವಾಗಿದೆ. ‘ಹಾಲು ಕರೆಯುವ ಹಸು’ ತನಗೆ ಬೇಕು ಎಂದು ಎರಡೂ ಪಕ್ಷಗಳು ಕಿತ್ತಾಡುತ್ತಿವೆ. ಫಲವತ್ತಾದ ಖಾತೆಗಳಿಗಾಗಿ (ಲೋಕೋಪಯೋಗಿ, ಹಣಕಾಸು, ಗೃಹ, ಕಂದಾಯ, ಜಲಸಂಪನ್ಮೂಲ) ಚರ್ಚೆ ಮತ್ತು ಗೊಂದಲ ಮುಂದುವರಿದಿದೆ. ಈವರೆಗೆ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದ  ಶಾಸಕರು ಈಗ ದೆಹಲಿಯಲ್ಲಿದ್ದಾರೆ. ರಾಜ್ಯದಲ್ಲಿ ಎರಡು ದಿನಗಳಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಉತ್ತರಿಸಿದರು.

‘ಮುಖ್ಯಮಂತ್ರಿ ಹುದ್ದೆಯಲ್ಲಿರುವವರು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್‌ ಮುಲಾಜಿನಲ್ಲಿ ಇದ್ದೇನೆ ಎಂದು ಹೇಳಿರುವುದು ಜನತೆಗೆ ಮಾಡಿದ ಅಪಮಾನ. ಕುಮಾರಸ್ವಾಮಿ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಕೈಗೊಂಬೆಯಾಗಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

‘ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ 28ರಂದು ನಡೆದಿದೆ. ಜೂನ್‌ 8ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದೆ. ರಾಮನಗರ ಮತ್ತು ಜಮಖಂಡಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಿದೆ. ಜಯನಗರದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್‌ ಅವರ ಪ್ರಚಾರದ ಸಂದರ್ಭದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದರು. ವಿಜಯಕುಮಾರ್‌ ಮತ್ತು ಅವರ ಕುಟುಂಬ ಸಂಘ ಪರಿವಾರ ಹಾಗೂ ಬಿಜೆಪಿಗಾಗಿ ದುಡಿದಿದ್ದಾರೆ. ಈ ಕ್ಷೇತ್ರದಲ್ಲಿ ವಿಜಯಕುಮಾರ್‌  ಸಹೋದರನಿಗೆ ಟಿಕೆಟ್‌ ನೀಡಿದೆ. ಜನತೆ ಬಿಜೆಪಿ ಬೆಂಬಲಿಸುವ ವಿಶ್ವಾಸ ಇದೆ’ ಎಂದು ಹೇಳಿದರು.

‘ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ. ಬೆಳಗಾವಿ ಹೊರತುಪಡಿಸಿ ಉಳಿದ ವಿಭಾಗಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಆರೂ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸ ಇದೆ’ ಎಂದು  ಹೇಳಿದರು.

‘ಲೋಕಸಭೆ ಚುನಾವಣೆಗೆ ಬಿಜೆಪಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ತಯಾರಿ ಆರಂಭವಾಗಿದೆ. ಪಕ್ಷ ಸೂಚಿಸಿದರೆ ಮತ್ತೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿಯೇ ಕಣಕ್ಕಿಳಿಯುತ್ತೇನೆ. ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.