ADVERTISEMENT

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಹುಬ್ಬಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಹೊಳೆಯಂತಾದ ಕಾರವಾರ ರಸ್ತೆಯಲ್ಲಿ ವಾಹನಗಳು ಬಹುತೇಕ ನೀರಿನಲ್ಲಿ ಮುಳುಗಿದವು. ಅಕ್ಕಪಕ್ಕದ ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿತು     ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಹುಬ್ಬಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಹೊಳೆಯಂತಾದ ಕಾರವಾರ ರಸ್ತೆಯಲ್ಲಿ ವಾಹನಗಳು ಬಹುತೇಕ ನೀರಿನಲ್ಲಿ ಮುಳುಗಿದವು. ಅಕ್ಕಪಕ್ಕದ ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿತು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಹಲವೆಡೆ ಸೋಮವಾರ ಬಿರುಸಿನ ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಕಾರವಾರ ರಸ್ತೆಯಲ್ಲಿರುವ ಕೆಂಪಗೇರಿಯಲ್ಲಿ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು. ಹಲವು ಮನೆಗಳಿಗೆ ನೀರು ನುಗ್ಗಿತ್ತು. ಧಾರವಾಡದಲ್ಲೂ ಸಂಜೆ ಧಾರಾಕಾರ ಮಳೆಯಾಗಿದೆ.

ಕುಂದಗೋಳ ತಾಲ್ಲೂಕಿನ ಇಂಗಳಗಿ ಗ್ರಾಮದ ಶಾಲೆ ಸಮೀಪದ ಹಳ್ಳ ತುಂಬಿ ಹರಿದಿದ್ದರಿಂದ, ಶಾಲೆಗೆ ನೀರು ನುಗ್ಗಿತು. ಸ್ಥಳೀಯರ ನೆರವಿನಿಂದ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್‌ ಮೂಲಕ ಶಾಲೆಯಿಂದ ಹೊರಗೆ ಕರೆತರಲಾಯಿತು.

ADVERTISEMENT

ಬೆಳಗಾವಿ ಸೇರಿದಂತೆ ಜಿಲ್ಲೆಯ ಬೈಲಹೊಂಗಲ ಹಾಗೂ ಗೋಕಾಕದಲ್ಲಿ ಸುಮಾರು ಅರ್ಧ ತಾಸು ಮಳೆಯಾಗಿದೆ. ಕಿತ್ತೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಹಿರೇಬಾಗೇವಾಡಿಯಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತಮ ಮಳೆ: ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾದರೆ, ಗೋಣಿಕೊಪ್ಪಲು ಭಾಗದಲ್ಲಿ ಜೋರು ಮಳೆ ಸುರಿದಿದೆ.

ಕೂಡಿಗೆ, ಹೆಬ್ಬಾಲೆ, ಸಿದ್ದಲಿಂಗಪುರ, ಗುಡ್ಡೆಹೊಸೂರು, ನಂಜರಾಯಪಟ್ಟಣದಲ್ಲೂ ನಿರಂತರವಾಗಿ ಮಳೆ ಬೀಳುತ್ತಿದೆ. ಭಾಗಮಂಡಲ, ನಾಪೋಕ್ಲು, ತಲಕಾವೇರಿ, ಅಯ್ಯಂಗೇರಿ, ಅಪ್ಪಂಗಳ, ಬೆಟ್ಟಗೇರಿ ವ್ಯಾಪ್ತಿಯಲ್ಲಿ ಬಿಡುವು ನೀಡುತ್ತಾ ರಭಸವಾಗಿ ಮಳೆ ಬೀಳುತ್ತಿದೆ.

ಮೈಸೂರಿನ ಗೌಸಿಯಾನಗರದಲ್ಲಿ ಎರಡು ಅಂತಸ್ತಿನ ಮನೆ ಕುಸಿದಿದೆ. ಮಂಡ್ಯ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆ ಸುರಿಯಿತು.

ನಗರದಲ್ಲಿ ಮಧ್ಯಾಹ್ನ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬೆಳಿಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಗುಡುಗು ಸಮೇತ ಮಳೆ ಸುರಿಯಿತು. ಮದ್ದೂರು ಪಟ್ಟಣದ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಮಳವಳ್ಳಿ, ನಾಗಮಂಗಲ ತಾಲ್ಲೂಕಿನಲ್ಲಿ ಕೆಲಕಾಲ ಸೋನೆ ಮಳೆ ಸುರಿಯಿತು. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಮೇತ ಮಳೆಗೆ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ
ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವಾರದಿಂದ ಮಳೆಯಾಗುತ್ತಿರುವುದರಿಂದ, ಆಲಮಟ್ಟಿ ಜಲಾಶಯಕ್ಕೆ ಭಾನುವಾರ ರಾತ್ರಿಯಿಂದ ಒಳಹರಿವು ಆರಂಭವಾಗಿದೆ.

ಸೋಮವಾರ ಜಲಾಶಯಕ್ಕೆ 428 ಕ್ಯುಸೆಕ್‌ ನೀರು ಹರಿದು ಬರಲಾರಂಭಿಸಿದೆ. ಮಳೆ ಮುಂದುವರಿದರೆ ಒಳಹರಿವು ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

2011ರಲ್ಲಿ ಮೇ 30ರಂದು ಒಳಹರಿವು ಆರಂಭವಾಗಿದ್ದರೆ, ನಂತರದ ವರ್ಷಗಳಲ್ಲಿ ಜೂನ್‌ 14ರ ನಂತರವೇ ಪ್ರಾರಂಭಗೊಂಡಿತ್ತು.

ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಸೋಮವಾರ 699 ಕ್ಯುಸೆಕ್ ನೀರು ಹರಿದು ಬಂದಿದ್ದು ಜಲಾಶಯದಲ್ಲಿ 4.20 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕೊಚ್ಚಿ ಹೋದ ಯುವತಿ

ಧಾರವಾಡ ತಾಲ್ಲೂಕಿನ ಮನಗುಂಡಿಯ ದೊಡ್ಡ ಕೆರೆ ತುಂಬಿ ಕೋಡಿ ಬಿದ್ದಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ಗ್ರಾಮದ ನೀಲವ್ವ ಹೊನ್ನಾಪುರ (18) ಎಂಬುವವರು ಸೋಮವಾರ ಕೊಚ್ಚಿ ಹೋಗಿದ್ದಾರೆ. ಕೆರೆಯಿಂದ ಸ್ವಲ್ಪ ದೂರದಲ್ಲಿ ಅವರ ದೇಹ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.