ADVERTISEMENT

ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿ 2ನೇ ದಿನವೂ ಬಂದ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಕೆರೂರ (ಬಾಗಲಕೋಟೆ ಜಿಲ್ಲೆ): ಮಲಪ್ರಭಾ ನದಿಯಲ್ಲಿ ಪ್ರವಾಹ ಕಡಿಮೆಯಾಗಿದ್ದರೂ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಗಡಿ ಭಾಗದ ಗೋವನಕೊಪ್ಪ ಗ್ರಾಮದ ಪರಿಶಿಷ್ಟರ ಕಾಲೊನಿಗೆ ನುಗ್ಗಿರುವ ನೀರು ಇನ್ನೂ ಇಳಿದಿಲ್ಲ. ರಾಷ್ಟ್ರೀಯ ಹೆದ್ದಾರಿ 218ರಲ್ಲಿರುವ ಸೇತುವೆ ಸಹ ಮುಳುಗಿರುವುದರಿಂದ ಹುಬ್ಬಳ್ಳಿ- ಸೊಲ್ಲಾಪುರ ಮಧ್ಯೆ ಸತತ ಎರಡನೇ ದಿನ ವಾಹನ ಸಂಚಾರ ಸ್ಥಗಿತಗೊಂಡಿದೆ.

ಈ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳು ಸೇತುವೆಯ ಆಚೆ ಮತ್ತು ಈಚೆ ಸಾಲುಗಟ್ಟಿ ಇನ್ನೂ ನಿಂತಿವೆ. ಕೆಲವು ವಾಹನಗಳು ಹೊಳೆ ಆಲೂರ, ರಾಮದುರ್ಗ ಮಾರ್ಗವಾಗಿ ಸಂಚರಿಸುತ್ತಿವೆ. ಪ್ರವಾಹದಿಂದ ಈಗಾಗಲೇ ಜಲಾವೃತವಾಗಿದ್ದ ಹಾಗನೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮತ್ತಷ್ಟು ನೀರು ನುಗ್ಗಿದೆ.
 
ಹೀಗಾಗಿ ಸುಮಾರು 25ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಈ ಮನೆಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳನ್ನು ತಾತ್ಕಾಲಿಕ ಶೆಡ್‌ಗಳಿಗೆ ಸ್ಥಳಾಂತರಿಸಲಾಗಿದೆ.

ಆಲಮಟ್ಟಿ ವರದಿ: ಆಲಮಟ್ಟಿ ಜಲಾಶಯದಿಂದ ಶನಿವಾರ ಮಧ್ಯಾಹ್ನದಿಂದ ಸ್ವಲ್ಪ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಆದರೂ ಪ್ರವಾಹದ ಆತಂಕ ಇಲ್ಲ.ಒಳಹರಿವು 2 ಲಕ್ಷ ಕ್ಯೂಸೆಕ್ ಇದ್ದು, 1.85 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

ಇನ್ನು ಒಳಹರಿವು ಹೆಚ್ಚಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಕಷ್ಣೆಗೆ ಬರುವ ನೀರಿನ ಪ್ರಮಾಣವೂ ಕಡಿಮೆಯಾಗತೊಡಗಿದೆ. ಆದ್ದರಿಂದ ಒಳಹರಿವು ಕ್ರಮೇಣ ಕಡಿಮೆಯಾಗಬಹುದು ಎನ್ನುವುದು ಅಧಿಕೃತ ಮೂಲಗಳ ಹೇಳಿಕೆ.

ವಿಜಾಪುರ ವರದಿ: ವಿಜಾಪುರ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿ ತೀರದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಆದರೆ, ನೀರು ನುಗ್ಗಿದ್ದರಿಂದ ನದಿ ತೀರದಲ್ಲಿ ಬೆಳೆದಿದ್ದ ಕಬ್ಬು, ಬಾಳೆ, ಮೆಕ್ಕೆಜೋಳ, ತೊಗರೆ ಮತ್ತಿತರ ಬೆಳೆ ಹಾನಿಯಾಗಿದೆ.

ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದು, ಪ್ರವಾಹದ ಆತಂಕ ಸಂಪೂರ್ಣವಾಗಿ ನಿವಾರಣೆಯಾದ ನಂತರ ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾ ಆಡಳಿತ ಹೇಳುತ್ತಿದೆ.

ಉಜನಿ ಜಲಾಶಯದಿಂದ ಭೀಮಾ ನದಿಗೆ 1.02 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದ್ದು, ಧೂಳಖೇಡ ಹತ್ತಿರ ಭೀಮಾ ನದಿಯ ಮಟ್ಟ 9.35 ಮೀಟರ್ ಇದೆ.

ಬೆಳಗಾವಿ ವರದಿ: ಮೂರು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ಕೃಷ್ಣಾ ಹಾಗೂ ಮಲಪ್ರಭಾ ನದಿಯ ಪ್ರವಾಹದಲ್ಲಿ ಇಳಿಮುಖವಾಗಿದೆ. ಪ್ರವಾಹದಿಂದ ಜಿಲ್ಲೆಯಲ್ಲಿ ಜಲಾವೃತಗೊಂಡಿದ್ದ 13 ಸೇತುವೆಗಳು ಶನಿವಾರ ಸಂಚಾರಕ್ಕೆ ಮುಕ್ತವಾಗಿವೆ.

ಮಲಪ್ರಭಾ ನದಿಯ ಹೊರ ಹರಿವು ಕಡಿಮೆಯಾಗಿದ್ದರಿಂದ ರಾಮದುರ್ಗ ಪಟ್ಟಣ ಹಾಗೂ ಕೆಲವು ಗ್ರಾಮಕ್ಕೆ ನುಗ್ಗಿದ್ದ ನೀರು ಇಳಿದಿದೆ. ತಾಲ್ಲೂಕಿನ ನಾಲ್ಕು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದೆ. ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 95,981 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿಯಲ್ಲಿ ಸುಮಾರು ಒಂದೂವರೆ ಅಡಿಯಷ್ಟು ಕೃಷ್ಣಾ ನದಿಯಲ್ಲಿ ನೀರು ಇಳಿದಿದೆ. ದೂಧಗಂಗಾ, ವೇದಗಂಗಾ ನದಿಯ ಪ್ರವಾಹವೂ ನಿಧಾನ ಗತಿಯಲ್ಲಿ ಕಡಿಮೆಯಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.