ADVERTISEMENT

ಹುಲಿರಾಯನ ರಕ್ಷಣೆಗೆ ಸಜ್ಜಾದ ಯೋಧರು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2011, 19:30 IST
Last Updated 16 ಆಗಸ್ಟ್ 2011, 19:30 IST
ಹುಲಿರಾಯನ ರಕ್ಷಣೆಗೆ ಸಜ್ಜಾದ ಯೋಧರು
ಹುಲಿರಾಯನ ರಕ್ಷಣೆಗೆ ಸಜ್ಜಾದ ಯೋಧರು   

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಳ ಸಂರಕ್ಷಣೆಗೆ ವಿಶೇಷ ಪಡೆ ಕಾರ್ಯಾರಂಭ ಮಾಡಿದೆ.

ಮಧುಮಲೈ, ಸತ್ಯಮಂಗಲ, ನಾಗರಹೊಳೆ ಅರಣ್ಯದಿಂದ ಈ ರಾಷ್ಟ್ರೀಯ ಉದ್ಯಾನ ಸುತ್ತುವರಿದಿದೆ. ಕೇರಳ ಹಾಗೂ ತಮಿಳುನಾಡಿನ ಗಡಿಗೆ ಅಂಟಿಕೊಂಡಿರುವ ಪರಿಣಾಮ ವನ್ಯಜೀವಿಗಳ ಕಳ್ಳಬೇಟೆ ಪ್ರಕರಣ ಹೆಚ್ಚುತ್ತಿದ್ದವು. ಅರಣ್ಯ ಇಲಾಖೆಯಲ್ಲಿ ತಳಮಟ್ಟದ ಸಿಬ್ಬಂದಿ ಕೊರತೆಯಿಂದ ಹುಲಿ ಸೇರಿದಂತೆ ವನ್ಯಜೀವಿ ಸಂಕುಲದ ರಕ್ಷಣೆಗೆ ತೊಡಕಾಗಿತ್ತು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(ಎನ್‌ಟಿಸಿಎ) ಮಾರ್ಗಸೂಚಿಯನ್ವಯ ಬಂಡೀಪುರಕ್ಕೆ ವಿಶೇಷ ಹುಲಿ ಸಂರಕ್ಷಣಾ ಪಡೆ(ಎಸ್‌ಟಿಪಿಎಫ್) ಮಂಜೂರಾಗಿತ್ತು. ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಈ ಪಡೆಗೆ ಸಮರ್ಥ ಸಿಬ್ಬಂದಿಯ ನೇಮಕ ಮಾಡಲಾಗಿತ್ತು. ಅವರಿಗೆ ಬೆಂಗಳೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಸೂಕ್ತ ತರಬೇತಿ ನೀಡಲಾಗಿದೆ.

ವಿಶೇಷ ಪಡೆಯಲ್ಲಿ 112 ಮಂದಿ ಪರಿಣತ ಸಿಬ್ಬಂದಿ ಇದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇದರ ಮುಖ್ಯಸ್ಥರಾಗಿರುತ್ತಾರೆ. ಮೂವರು ವಲಯ ಅರಣ್ಯಾಧಿಕಾರಿಗಳು, 18 ಮಂದಿ ಫಾರೆಸ್ಟರ್ ಹಾಗೂ 90 ಗಾರ್ಡ್‌ಗಳು ಪಡೆಯಲ್ಲಿದ್ದು, ಅವರಿಗೆ ಆಧುನಿಕ ಶಸ್ತ್ರಾಸ್ತ್ರ ಹಾಗೂ ಸಂಚಾರಕ್ಕೆ ವಾಹನದ ಸೌಲಭ್ಯವೂ ಉಂಟು.

ಪ್ರಸ್ತುತ ತರಬೇತಿ ಹೊಂದಿರುವ 47 ಮಂದಿಯ ತಂಡ ಬಂಡೀಪುರದಲ್ಲಿ ಹುಲಿ ಸಂರಕ್ಷಣೆಗೆ ಕಾರ್ಯಾರಂಭ ಮಾಡಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿಯೇ ಹುಲಿ ಸಂರಕ್ಷಣೆಗೆ ಮೊದಲ ಬಾರಿಗೆ ವಿಶೇಷ ಪಡೆ ಹೊಂದಿದ ಹೆಗ್ಗಳಿಕೆಗೆ ಬಂಡೀಪುರ ಪಾತ್ರವಾಗಿದೆ. ಇದೇ ಪಡೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಹುಲಿಗಳ ಸಂರಕ್ಷಣೆಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಕರ್ತವ್ಯಕ್ಕೆ ಹಾಜರಾಗಿರುವ 47 ಸಿಬ್ಬಂದಿಯನ್ನು ಮೂರು ತುಕಡಿಗಳಾಗಿ ವಿಂಗಡಿಸಲಾಗಿದೆ. ಮೇಲುಕಾಮನಹಳ್ಳಿ, ತಿತ್ತುಮತಿ ಹಾಗೂ ಬಂಡೀಪುರಕ್ಕೆ ಹೊಂದಿಕೊಂಡಿರುವ ಹೆಗ್ಗಡದೇವನಕೋಟೆಯ ಅರಣ್ಯ ಪ್ರದೇಶಕ್ಕೆ ನಿಯೋಜಿಸಲಾಗಿದೆ. ದಿನದ 24ಗಂಟೆಯೂ ಈ ಪಡೆ ವನ್ಯಜೀವಿಗಳ ಸಂರಕ್ಷಣೆಗೆ ಸನ್ನದ್ಧವಾಗಿರುವುದು ವಿಶೇಷ.
ಕೇರಳದ ಕೆಲವು ಮಂದಿ ಗುಂಡ್ಲುಪೇಟೆ ಭಾಗದಲ್ಲಿ ಗುತ್ತಿಗೆ ಮೇಲೆ ಜಮೀನು ಪಡೆದು ಶುಂಠಿ ಬೆಳೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇವರಲ್ಲಿ ಅರ್ಧದಷ್ಟು ಜನರು ವನ್ಯಜೀವಿಗಳ ಕಳ್ಳಬೇಟೆಯಲ್ಲಿ ತೊಡಗಿಕೊಂಡಿರುವ ಶಂಕೆಯಿದೆ. ಜತೆಗೆ, ಅಂತರರಾಜ್ಯ ಗಡಿಯ ಸೂಕ್ಷ್ಮಪ್ರದೇಶದಲ್ಲಿ ಕರ್ನಾಟಕದೊಳಗೆ ನುಸುಳಿ ವನ್ಯಪ್ರಾಣಿ ಹತ್ಯೆ ಮಾಡುವ ಬೇಟೆಗಾರರ ಮೇಲೆ ಈ ವಿಶೇಷ ಪಡೆ ಹದ್ದಿನಕಣ್ಣು ನೆಡಲಿದೆ.

ವಾಹನಗಳ ಕ್ಲಚ್ ವೈರ್, ತಂತಿ ಬಳಸಿ ಕಾಡುಪ್ರಾಣಿಗಳು ಸಂಚರಿಸುವ ಮಾರ್ಗದಲ್ಲಿ ಉರುಳು ಹಾಕಿ ಮಾಂಸಕ್ಕಾಗಿ ಅವುಗಳನ್ನು ಸಾಯಿಸುವ ಕಳ್ಳಬೇಟೆಗಾರರು ಇದ್ದಾರೆ. ಕಾಡಂಚಿನ ಜಮೀನುಗಳಲ್ಲಿ ತಂತಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಪರಿಣಾಮ ಪ್ರಾಣಿಗಳು ಅಸುನೀಗುತ್ತಿವೆ. ಕಳ್ಳಬೇಟೆಗಾರರು ಕಾಡುಪ್ರಾಣಿ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಪುನಃ ವನ್ಯಜೀವಿಗಳ ಹತ್ಯೆಯಲ್ಲಿ ತೊಡಗಿಕೊಂಡಿರುವ ನಿದರ್ಶನಗಳಿವೆ. ಇಂಥ ಕಳ್ಳಬೇಟೆಗಾರರ ಚಲನವಲನದ ಮೇಲೆ ವಿಶೇಷ ಪಡೆ ತೀವ್ರ ನಿಗಾವಹಿಸಲಿದೆ.

~ವಿಶೇಷ ಪಡೆ ನೇಮಕದಿಂದ ಹುಲಿ ಸಂರಕ್ಷಣೆಗೆ ಹೆಚ್ಚಿನ ಬಲ ನೀಡಿದಂತಾಗಿದೆ. ಶೀಘ್ರವೇ, ಎರಡನೇ ತಂಡ ಕೂಡ ಕರ್ತವ್ಯಕ್ಕೆ ಹಾಜರಾಗಲಿದೆ~ ಎಂದು ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ~ಪ್ರಜಾವಾಣಿ~ಗೆ ತಿಳಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT