ADVERTISEMENT

ಹೆಂಡಿರು, ಮಕ್ಕಳನ್ನೂ ಉಳಿಸಿಕೊಳ್ಳಲಿಲ್ಲ...

ರಾಹುಲ ಬೆಳಗಲಿ
Published 22 ಮೇ 2012, 19:30 IST
Last Updated 22 ಮೇ 2012, 19:30 IST

ಪೆನುಕೊಂಡ (ಆಂಧ್ರಪ್ರದೇಶ): `ನಮ್ ಊರಾಗ್ ಒಂದ್ ಹೊತ್ತಿನ ಊಟ ಮಾಡಲಿಕ್ಕೂ ತ್ರಾಸ್ ಆಗೈತ್ರಿ... ಸಣ್ಣ ಸಣ್ಣ ಮಕ್ಕಳು ಹಸಿವಿನಿಂದ ಒದ್ದಾಡ್ತಾವ... ನಮಗ್ ಯಾರೂ ಕೂಲೀನು ಕೊಡೋರಿಲ್ಲ... ಮಳಿ-ಬೆಳಿ ಇಲ್ಲದ ಊರಾಗ ಇದ್ದರ ಏನ್ ಮಾಡಬೇಕಂತ ಗಂಟುಮೂಟಿ ಕಟ್ಕೊಂಡು ಗಾಡಿ ಹತ್ತಿದ್ವಿ... ಆದರೆ, ನಾವ್ ಬೆಂಗಳೂರು ಮುಟ್ಟಲಿಲ್ಲ... ನಮ್ ಹೆಂಡರು-ಮಕ್ಕಳನ್ನು ಉಳಿಸಿಕೊಳ್ಳಲು ಆಗಲಿಲ್ರಿ...~

`ನಮ್ಮ ಗೆಳೆಯ ಹುಸ್ಸೇನಪ್ಪ ಸ್ವಲ್ಪ ಓದಿಕೊಂಡಿದ್ದ... ಬೆಂಗಳೂರದಾಗ್ ಯಾವದರ ಕೆಲಸ ಹುಡ್ಕೊಂಡು ಅಲ್ಲೇ ಜೀವನ ಮಾಡಬೇಕಂತ ಇದ್ದ.. ಆದರ ನನ್ ಕಣ್ ಮುಂದ್ ಅಂವ ಸುಟ್ಟು ಕರಕಲಾಗ್ಯಾನ್ರಿ... ಮನಿಯವರನ್ನ ಸಾಕಬೇಕು... ಎಲ್ಲರಿಗೂ ಚೆನ್ನಾಗಿ ನೋಡಿಕೊಳ್ಳಬೇಕಂತ ಬಹಳ ಆಸೆ ಇತ್ತರ‌್ರೀ ಅವನಿಗ್... ದೇವರು ಕರ‌್ಕೊಂಡ ಬಿಟ್ಟ...~

ಹೀಗೆ ಒಬ್ಬಿಬ್ಬರಲ್ಲ, ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿಗೆ ಹೊರಟಿದ್ದ ಕೊಪ್ಪಳ, ಗಂಗಾವತಿ, ಬಳ್ಳಾರಿಯ ನೂರಾರು ಮಂದಿ ಕೂಲಿಕಾರ್ಮಿಕರು ರೋದಿಸುತ್ತಿದ್ದರೆ ಕರುಳು ಕಿತ್ತುಬರುವಂತಿತ್ತು.

ಅಪರಿಚಿತ ಊರಿನಲ್ಲಿ ಆಪ್ತರು, ಸಂಬಂಧಿಕರನ್ನು ಕಳೆದುಕೊಂಡು ಸಂಕಟಪಡುತ್ತಿದ್ದರು. ಸುಟ್ಟು ಕರಕಲಾದ ದೇಹಗಳ ಸಾಲನ್ನು ನೋಡಲಾಗದೇ ಮತ್ತು ಅವರಲ್ಲಿನ ತಮ್ಮ ಸಂಬಂಧಿಕರನ್ನು ಗುರುತಿಸಲಾಗದೇ ಅಳುತ್ತಿದ್ದರು.
ಕೊಪ್ಪಳ, ಗಂಗಾವತಿ ಮತ್ತು ಬಳ್ಳಾರಿ ತಾಲ್ಲೂಕುಗಳ ಬಹುತೇಕ ಕೂಲಿಕಾರ್ಮಿಕರು ಕೆಲಸ ಹುಡುಕಿಕೊಂಡು ಹಂಪಿ ಎಕ್ಸಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಹೊರಟಿದ್ದರು.

ಸೋಮವಾರ ರಾತ್ರಿ ಕೆಲಸದ ಆಸೆ ಹೊತ್ತು ರೈಲು ಹತ್ತಿದ್ದವರು ಪೆನುಕೊಂಡ ತಲುಪುವ ವೇಳೆಗೆ ಆಘಾತ ಕಾದಿತ್ತು. ಪೆನುಕೊಂಡ ರೈಲು ನಿಲ್ದಾಣದ ಬಳಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 25 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾದರೆ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

`ಹೊಟ್ಟಿಪಾಡಿಗ್ ಎಲ್ಲಿಯಾದರೂ ಹೋಗಲೇಬೇಕಲ್ರಿ. ಬೆಂಗಳೂರದಾಗ್ ಕೂಲಿ-ನಾಲಿ ಮಾಡ್ಕೊಂಡು ಜೀವನ ನಡೆಸಬೇಕೊಂತ ಇತ್ತು. ನಮ್ಮೂರಾಗಿನ ಬಹಳಷ್ಟು ಮಂದಿ ಸೇರ‌್ಕೊಂಡು ಬೆಂಗಳೂರಿಗ್ ಹೊರಟಿದ್ವಿ. ಆದರೆ, ನನ್ನ ಕಣ್ ಮುಂದ ನನ್ನ ಗೆಳೆಯರು ಮತ್ತು ಸಂಬಂಧಿಕರು ಸುಟ್ಟು ಹೋದರು~ ಎಂದು ಹೊಸಪೇಟೆಯ ಅಲಿಬಾಷಾ ಗೋಳಾಡಿದರು.

`ನನ್ ಹೆಂಡತಿ ಲಕ್ಷ್ಮಿದೇವಿ, ಮಕ್ಕಳಾದ ಗಾಯತ್ರವ್ವ, ಶ್ರೀದೇವಿ, ಮಲ್ಲೇಶಪ್ಪಗೆ ಕರ‌್ಕೊಂಡ್ ರಾತ್ರಿ 9ರ ಸುಮಾರು ಹೊಸಪೇಟಿಯಿಂದ ಗಾಡಿ ಹತ್ತಿದ್ವಿ. ಸ್ಟೇಷನದಾಗ್ ರೊಟ್ಟಿ ಊಟ ಮಾಡಿದ್ವಿ. 3 ಗಂಟೆ ಸುಮಾರಿಗ್ ಜೋರಾಗಿ ನಿದ್ದಿ ಹತ್ತಿತ್ತು. ಜೋರಾಗಿ ಡಿಕ್ಕಿ ಹೊಡೆದ ಶಬ್ಧ ಕೇಳಿಸಿತು. ಹೊರಗಡೆ ಬಂದು ನೋಡೋದ್ರಾಗ್ ಎಂಜಿನ್ ಹಿಂದಿನ ಬೋಗಿಯೊಳಗ್ ಬೆಂಕಿ ಹೊತ್ತಿಕೊಂಡಿತ್ತು. ಅದರಾಗ್ ನನ್ನ ಹೆಂಡತಿ ಲಕ್ಷ್ಮಿದೇವಿ, ಮಲ್ಲೇಶಪ್ಪ ಎಲ್ಲಾರು ಇದ್ದರು. ನನ್ನ ಕಣ್‌ಮುಂದೆ ಅವರಿಬ್ಬರು ಸುಟ್ಟುಹೋದರು. ಇನ್ನಿಬ್ಬರು ಮಕ್ಕಳು ಪಾರಾದರು~ ಎಂದು ಕೊಪ್ಪಳ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಹೊನ್ನಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಹೊನ್ನಪ್ಪ ಅವರಿಗೂ ಕಾಲಿಗೆ ಗಾಯವಾಗಿದ್ದು, ಪೆನುಕೊಂಡದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ಗಾಯಗೊಂಡಿರುವ ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅದೇ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಹಿಂದೂಪುರ ಮತ್ತು ಪುಟ್ಟಪರ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಇನ್ನೂ ಕೆಲವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.