ADVERTISEMENT

ಹೆಂಡ್ತಿ ಮಾತು ಕೇಳಿದರೆ ಸಮಸ್ಯೆಯೇ ಇರೋದಿಲ್ಲ...!

ವಿಚ್ಚೇದನ ಪ್ರಕರಣದಲ್ಲಿ ಪತಿಗೆ ಹೈಕೋರ್ಟ್‌ ಮೌಖಿಕ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST

ಬೆಂಗಳೂರು: ‘ಹೆಂಡತಿ ಹೇಳಿದಂತೆ ನಡೆದುಕೊಂಡರೆ ಜೀವನದಲ್ಲಿ ಬಹುತೇಕ ಸಮಸ್ಯೆ ಬಗೆಹರಿಯುತ್ತವೆ...!!’

ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿವಾಹ ವಿಚ್ಛೇದನ ಕೋರಿಕೆ ಪ್ರಕರಣವೊಂದರಲ್ಲಿ, ‘ಮದುವೆ ಅನ್ನೋದೇ ಒಂದು ಸಮಸ್ಯೆ, ಅವುಗಳನ್ನೆಲ್ಲಾ ಮೀರಿ ನಿಲ್ಲುವುದೇ ಜೀವನ. ಯಾರು ಹೆಂಡತಿ ಮಾತು ಕೇಳುತ್ತಾರೊ ಅವರು ಯಶಸ್ವಿ ಜೀವನ ನಡೆಸುತ್ತಿದ್ದಾರೆ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಪತಿ, ‘ಸ್ವಾಮಿ ನಾನು ಸಾಫ್ಟವೇರ್‌ ಎಂಜಿನಿಯರ್‌. ಈಕೆಯ ಜೊತೆ ದಿನಾಲೂ ಜಗಳ ಆಡಿ ಆಡಿ ಈಗ ಕೆಲಸವನ್ನೇ ಕಳೆದುಕೊಂಡಿದ್ದೇನೆ. ಇವಳಿಂದ ನನ್ನ ಜೀವನವೇ ಹಾಳಾಗಿದೆ. ನಾನು ಈಕೆಯೊಂದಿಗೆ ಬದುಕುವುದಿಲ್ಲ. ನನಗೆ ನನ್ನ ತಾಯಿಯೇ ಮುಖ್ಯ’ ಎಂದರು.

ADVERTISEMENT

ಇದಕ್ಕೆ ನ್ಯಾಯಮೂರ್ತಿಗಳು, ‘ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದು ಮಾಡಿಕೊಳ್ಳಬೇಡಿ. ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡು ಬನ್ನಿ’ ಎಂದು ಸೂಚಿಸಿ ಕೋರ್ಟ್‌ಹಾಲ್‌ನಿಂದ ಹೊರಗೆ ಕಳುಹಿಸಿದರು.

ಆದರೆ, ಇಬ್ಬರೂ ಸಹತಮಕ್ಕೆ ಬಾರದ ಕಾರಣ ನ್ಯಾಯಮೂರ್ತಿ ರಮೇಶ್‌, ‘ಮಾತುಕತೆಯಿಂದ ಬಗೆಹರಿಯದ ಯಾವುದೇ ಸಮಸ್ಯೆ ಇಲ್ಲ. ಇನ್ನೂ ಕಾಲ ಮಿಂಚಿಲ್ಲ. ಇಬ್ಬರೂ ಮತ್ತೊಮ್ಮೆ ಕೂತು ಶಾಂತವಾಗಿ ಮಾತಾಡಿಕೊಳ್ಳಿ. ಹೆಂಡತಿಯನ್ನು ಫಾಲೋ ಮಾಡಿದರೆ ನಿಮಗೆ ಸಮಸ್ಯೆಯೇ ಇರೋದಿಲ್ಲ’ ಎಂದು ಪತಿಗೆ ಸಲಹೆ ನೀಡಿದರು!.

ವಿಚಾರಣೆಯನ್ನು ಏಪ್ರಿಲ್‌ 2ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.