ADVERTISEMENT

ಹೆಗಡೆಯದು ಆಚಾರವಿಲ್ಲದ ನಾಲಗೆ: ಸಿ.ಎಂ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 19:30 IST
Last Updated 8 ಡಿಸೆಂಬರ್ 2017, 19:30 IST
ಹೆಗಡೆಯದು ಆಚಾರವಿಲ್ಲದ ನಾಲಗೆ: ಸಿ.ಎಂ ಟೀಕೆ
ಹೆಗಡೆಯದು ಆಚಾರವಿಲ್ಲದ ನಾಲಗೆ: ಸಿ.ಎಂ ಟೀಕೆ   

ಮೈಸೂರು: ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರದು ಆಚಾರವಿಲ್ಲದ ನಾಲಗೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶುಕ್ರವಾರ ಟೀಕಿಸಿದರು.

‘ಸಿದ್ದರಾಮಯ್ಯ ಪಾಪದ ಪಿಂಡ’ ಎಂಬ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರ ನಾಲಗೆ ಸಂಸ್ಕೃತಿಯನ್ನು ಹೇಳುತ್ತದೆ. ಪುರಂದರದಾಸರು ‘ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದಿದ್ದಾರೆ. ಅದು ಇವರಿಗೆ ಅನ್ವಯಿಸುತ್ತದೆ ಎಂದು ಚಾಟಿ ಬೀಸಿದರು.

‘ಬಿಜೆಪಿಯವರು ತಮಗೆ ಸಂಸ್ಕೃತಿ, ಸಂಸ್ಕಾರ ಇದೆ ಎಂದು ಹೇಳುವುದು ಇದೇ ಏನು? ನಾನು ಹಳ್ಳಿಯಿಂದ ಬಂದವನು. ನನಗೆ ಹೆಗಡೆಗಿಂತಲೂ ಕೆಟ್ಟದಾಗಿ ಬಯ್ಯಲು ಬರುತ್ತದೆ. ಆದರೆ, ಆ ರೀತಿಯ ಭಾಷೆ ಬಳಸಬಾರದು. ಮಣಿಶಂಕರ್‌ ಅಯ್ಯರ್ ಅವರು ಪ್ರಧಾನಿಗೆ ‘ನೀಚ’ ಎಂಬ ಪದ ಬಳಸಿದ ಕಾರಣಕ್ಕೆ, ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ಇದನ್ನು ಬಿಜೆಪಿಯಿಂದ ನಿರೀಕ್ಷೆ ಮಾಡಲು ಸಾಧ್ಯವೇ? ಕೋಮುವಾದಿಗಳಿಂದ ನಾವು ಏನನ್ನೂ ನಿರೀಕ್ಷಿಸುವುದಿಲ್ಲ’ ಎಂದರು.

ADVERTISEMENT

ಸ್ವೇಚ್ಛಾಚಾರ ಬಿಡಲಿ: ಸಂಸದ ಪ್ರತಾಪ ಸಿಂಹ ಅವರು ಸ್ವೇಚ್ಛಾಚಾರವನ್ನು ಬಿಡಬೇಕು. ಈ ನಾಡಿನ ಕಾನೂನಿಗೆ ಗೌರವ ಕೊಡಬೇಕು. ಕಾನೂನು ರಚಿಸುವವರೇ ಕಾನೂನು ಉಲ್ಲಂಘಿಸಿದರೆ ಹೇಗೆ? ಸರ್ಕಾರಿ ಕಾರನ್ನು ಚಾಲನೆ ಮಾಡಿ ಪೊಲೀಸ್ ಬ್ಯಾರಿಕೇಡ್‌ಗೆ ಗುದ್ದುವುದನ್ನು ಒಪ್ಪಿಕೊಳ್ಳಬೇಕೆ? ಸಂಸದನಾದ ಕೂಡಲೇ ಕಾನೂನು ಮುರಿಯಲು ಸಾಧ್ಯವೆ ಎಂದು
ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.