ADVERTISEMENT

ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ: ಗಾಜು ಪುಡಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಹದ್ದು ಡಿಕ್ಕಿ ಹೊಡೆದ ಪರಿಣಾಮ ಪುಡಿಯಾಗಿರುವ ಹೆಲಿಕಾಪ್ಟರ್ ಗಾಜು
ಹದ್ದು ಡಿಕ್ಕಿ ಹೊಡೆದ ಪರಿಣಾಮ ಪುಡಿಯಾಗಿರುವ ಹೆಲಿಕಾಪ್ಟರ್ ಗಾಜು   

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ‘ಹೆಲಿ ಜಾಲಿ ರೈಡ್‌’ನ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ಪೈಲೆಟ್‌ ಮುಂಭಾಗದ ಬಲಬದಿಯ ಗಾಜು ಭಾನುವಾರ ಪುಡಿಯಾಗಿದೆ.

ಅವಘಡದಲ್ಲಿ ಹದ್ದು ಗಂಭೀರವಾಗಿ ಗಾಯಗೊಂಡು ಕೆಳಗೆ ಉರುಳಿದೆ. ಅದರ ರಕ್ತದ ಕಲೆಗಳು ಗಾಜಿನ ಮೇಲೆ ಹರಡಿದೆ. ನಿಯಂತ್ರಣ ಕಳೆದುಕೊಳ್ಳದಂತೆ ಜಾಗೃತಿ ವಹಿಸಿದ ಪೈಲೆಟ್‌ ಶ್ರೀನಿವಾಸರಾವ್‌ ಹೆಲಿಪ್ಯಾಡಿಗೆ ಮರಳಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ 6 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪೈಲೆಟ್‌ ದೇಹಕ್ಕೆ ಗಾಜಿನ ಕೆಲ ಚೂರುಗಳು ಹೊಕ್ಕಿವೆ.  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಭಾನುವಾರ ಬೆಳಿಗ್ಗೆ 9.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಮಹಲ್‌ ಹೆಲಿಪ್ಯಾಡಿನಿಂದ ಕಾಪ್ಟರ್‌ ಮೇಲೆ ಹಾರಿತು. ಲಲಿತಮಹಲ್‌ ಅರಮನೆ, ನಜರಬಾದ್, ಅಂಬಾವಿಲಾಸ ಅರಮನೆಯಿಂದ ಮುಂದೆ ಸಾಗಿದಾಗ ಆಕಾಶದಲ್ಲಿ ಹಾರಾಡುತ್ತಿದ್ದ ಹದ್ದೊಂದು ಡಿಕ್ಕಿ ಹೊಡೆದಿದೆ. ಆಕಸ್ಮಿಕವಾಗಿ ಸಂಭವಿಸಿದ ಅವಘಡದಿಂದ ಪ್ರಯಾಣಿಕರು ವಿಚಲಿತರಾಗದಂತೆ ಪೈಲೆಟ್‌ ನೋಡಿಕೊಂಡಿದ್ದಾರೆ. ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿ ಹೆಲಿಪ್ಯಾಡಿಗೆ ಮರಳಿದರು’ ಎಂದು ಸರ್ಕಾರಿ ಸ್ವಾಮ್ಯದ ಹೆಲಿಕಾಪ್ಟರ್‌ ಸಂಸ್ಥೆ ‘ಪವನ್‌ ಹನ್ಸ್‌’ ಮೂಲಗಳು ಮಾಹಿತಿ ನೀಡಿವೆ.

ADVERTISEMENT

‘ಗಾಜು ಒಡೆದ ಮಾತ್ರಕ್ಕೆ ಹೆಲಿಕಾಪ್ಟರ್‌ ನಿಯಂತ್ರಣ ಕಳೆದುಕೊಳ್ಳುವುದಿಲ್ಲ. ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗುವುದಿಲ್ಲ. ನಾಗರಿಕ ವಾಯುಯಾನ ಪ್ರಧಾನ ನಿರ್ದೇಶಕರು (ಡಿಜಿಸಿಎ) ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ತಾಂತ್ರಿಕ ಲೋಪ, ಅವಘಡಕ್ಕೆ ನಿಖರವಾದ ಕಾರಣ ಪತ್ತೆಯಾಗಲಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.