ADVERTISEMENT

`ಹೇಮಾವತಿ'ಗೆ ಜನರ ದಂಡು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಹಾಸನ: ಗೊರೂರಿನ ಹೇಮಾವತಿ ಜಲಾಶಯ ಈಗ ಪ್ರವಾಸಿ ಕೇಂದ್ರದ ರಂಗು ಪಡೆದುಕೊಂಡಿದೆ. ಜಲಾಶಯದ ಆರು ಗೇಟ್‌ಗಳಿಂದ ನೀರು ಉಕ್ಕಿ ಹರಿಯುವುದನ್ನು ನೋಡಲು ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಸಾವಿರಾರು ಜನರು ಈಗ ಜಲಾಶಯದತ್ತ ಬರುತ್ತಿದ್ದಾರೆ.`ಶುಕ್ರವಾರ ಜಲಾಶಯದಿಂದ 51 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

1996ರಲ್ಲಿ ಭಾರಿ ಮಳೆಯಾಗಿದ್ದಾಗ ಜಲಾಶಯದಿಂದ 65 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲಾಗಿತ್ತು. ಅದನ್ನು ಬಿಟ್ಟರೆ ಈಗ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಅದಕ್ಕೂ ಹಿಂದೆ 1990ರಲ್ಲಿ ಈವರೆಗಿನ ಗರಿಷ್ಠ ಎನ್ನಬಹುದಾದ 92 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಹೇಮಾವತಿ ಜಲಾನಯನ ಪ್ರದೇಶವಾದ ಸಕಲೇಶಪುರ, ಮೂಡಿಗೆರೆ ಮುಂತಾದ ಭಾಗಗಳಲ್ಲಿ ಈಗಲೂ 100ರಿಂದ 150 ಮಿ. ಮೀ.ಮಳೆಯಾಗುತ್ತಿದೆ. ಇದರಿಂದ ಒಂದೆ ರಡು ದಿನ ಒಳಹರಿವು ಇದೇ ಪ್ರಮಾಣದಲ್ಲಿರುವ ನಿರೀಕ್ಷೆ ಇದೆ' ಎಂದು ಜಲಾಶಯದ ಕಾರ್ಯ ನಿರ್ವಾಹಕ ಎಂಜಿನಿಯರ್ ವೆಂಕಟರಮಣಪ್ಪ ತಿಳಿಸಿದರು.

`ಹೇಮಾವತಿ ಜಲಾಶಯದ ಸಾಮರ್ಥ್ಯ 37 ಟಿ.ಎಂ.ಸಿ.ಅಡಿ. ಕಳೆದ ವರ್ಷ ಜಲಾಶಯ ತುಂಬಿರಲಿಲ್ಲ. ಆದರೆ, ಈ ಬಾರಿ ಜುಲೈ ಅಂತ್ಯದ ವೇಳೆಗೆ ಒಟ್ಟಾರೆ ಸುಮಾರು 50 ಟಿ.ಎಂ.ಸಿ. ನೀರು ಇಲ್ಲಿ ಹರಿದಿದೆ. ಜೂನ್ ಅಂತ್ಯಕ್ಕೆ ಜಲಾಶಯಕ್ಕೆ 9.8 ಟಿಎಂಸಿ ಅಡಿ ನೀರು ಬಂದಿದ್ದರೆ, ಜುಲೈ ತಿಂಗಳಲ್ಲಿ ವೇಳೆಗೆ 36.5 ಟಿ.ಎಂ.ಸಿ ಅಡಿ ನೀರು ಬಂದಿದೆ. ಕಳೆದ ಎರಡು ದಿನಗಳಲ್ಲಿ ಐದು ಟಿಎಂಸಿ ನೀರು ಬಂದಿದೆ. ಮುಂದಿನ ಒಂದೆರಡು ದಿನಗಳಲ್ಲೂ ಇದೇ ಸ್ಥಿತಿ ಇರುವ ಸಾಧ್ಯತೆ ಇದೆ' ಎಂದು ಅವರು ತಿಳಿಸಿದರು.

ವಾರದಿಂದ ಜಲಾಶಯದ ಕ್ರೆಸ್ಟ್‌ಗೇಟ್ ಮೂಲಕ ನೀರು ಹರಿಸಲಾಗುತ್ತಿದ್ದು, ಶುಕ್ರವಾರ 51 ಸಾವಿರ ಕ್ಯೂಸೆಕ್ ನೀರು ಬಿಟ್ಟಾಗಿನ ದೃಶ್ಯವಂತೂ ರಮಣೀಯವಾಗಿತ್ತು. ನೂರಾರು ಅಡಿ ಎತ್ತರದಿಂದ ಧುಮುಕುವ ನೀರು ಮತ್ತೆ ಅದೇ ಎತ್ತರಕ್ಕೆ ಚಿಮ್ಮಿ ಮಂಜಿನ ಮಣಿಗಳಂತೆ ಸುತ್ತಮುತ್ತ ಆವರಿಸಿಕೊಳ್ಳುತ್ತಿರುವುದನ್ನು ಸಮೀಪದಿಂದ ನೋಡುವ ಅವಕಾಶ ಜನರಿಗೆ ಲಭಿಸಿದೆ.

ಮಳೆಯ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಜಲಾಶಯ ವೀಕ್ಷಣೆಗೆ ಬರುವ ಜನರ ಸಂಖ್ಯೆಯೂ ದ್ವಿಗುಣವಾಗಿತ್ತು. ಜಲಾಶಯದಿಂದ ಧುಮುಕಿ, ಗಾಳಿಯ ರಭಸಕ್ಕೆ ದಡಕ್ಕೆ ಅಪ್ಪಳಿಸಿ ಚಿಮ್ಮುವ ನೀರಿನಲ್ಲಿ ಮೀಯುವವರ ಸಂಖ್ಯೆಯೂ ದೊಡ್ಡದಾಗಿಯೇ ಇತ್ತು. ಹಲವು ವರ್ಷಗಳ ಬಳಿಕ ಇಂಥ ದೃಶ್ಯ ಸವಿಯುವ ಅವಕಾಶ ಒದಗಿದ್ದರಿಂದ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.