ADVERTISEMENT

ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ: 12 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಬೆಂಗಳೂರು: ರಾಜ್ಯದಲ್ಲಿರುವ ಆರು ವರ್ಷಕ್ಕಿಂತ ಚಿಕ್ಕ ಮಕ್ಕಳ ಪೈಕಿ ಸುಮಾರು 12 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತ್ದ್ದಿದರೆ, ಸುಮಾರು 21 ಲಕ್ಷ ಮಕ್ಕಳು ಅಲ್ಪ ಪ್ರಮಾಣದ ಅಪೌಷ್ಟಿಕತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ರಾಯಚೂರಿನಲ್ಲಿ ಹಲವು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಈ ಲಿಖಿತ ಮಾಹಿತಿ ನೀಡಿದೆ.

ಅಪೌಷ್ಟಿಕತೆ ಕುರಿತಾಗಿ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಸರ್ಕಾರ ಸಮಿತಿ ರಚನೆ ಮಾಡಿದೆ. ಈ ಸಮಿತಿ ನೀಡಿರುವ ವರದಿಯ ಕುರಿತು ಈಗ ಸರ್ಕಾರ ಮಾಹಿತಿ ನೀಡಿದೆ.

`ರಾಜ್ಯದಲ್ಲಿ 10,50,006 ಲಕ್ಷ ಬಾಲಕರು ಹಾಗೂ 10,50,812 ಬಾಲಕಿಯರು ಅಲ್ಪಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. `ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ~ 2010ರಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ, ಮೂರು ವರ್ಷಕ್ಕಿಂತ ಕೆಳಗಿನ ಶೇ 28.7 ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ~ ಎಂಬ ಅಂಕಿ ಅಂಶವನ್ನು ವಿವರಿಸಲಾಗಿದೆ.

`ಬಾಲ್ಯ ವಿವಾಹ, ಆಹಾರದ ಕೊರತೆ, ಬಡತನ, ಪದೇ ಪದೇ ಗರ್ಭಿಣಿ ಆಗುವುದು ಮುಂತಾದ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಿದೆ~ ಎಂದು ಅದರಲ್ಲಿ ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇದರ ವಿಚಾರಣೆ ನಡೆಸುತ್ತಿದ್ದಾಗ ಮುಷ್ಕರ ನಿರತ ವಕೀಲರು ಗಲಾಟೆ ಆರಂಭಿಸಿದರು. ಆದುದರಿಂದ ವಿಚಾರಣೆ ಮುಂದಕ್ಕೆ ಹಾಕಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.