ADVERTISEMENT

ಹೈ-ಕ ವಲಸಿಗರಿಗೂ ಮೀಸಲು

ಸಂಪುಟ ಉಪ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಬೆಂಗಳೂರು: ಹೈದರಾಬಾದ್-ಕರ್ನಾಟಕ ಪ್ರದೇಶದಿಂದ ವಲಸೆ ಬಂದು ರಾಜ್ಯದ ಇತರ ಭಾಗಗಳಲ್ಲಿ ವಾಸಿಸುವವರಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ.

ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕೇಂದ್ರ ಸರ್ಕಾರದ ತೀರ್ಮಾನ ಜಾರಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಗಿತ್ತು.
ಹೈ.ಕ ವ್ಯಾಪ್ತಿಯ ಜಿಲ್ಲೆಗಳ ಎಲ್ಲ ಸಚಿವರು ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಮಿತಿಯ ಸದಸ್ಯರಾಗಿದ್ದರು. ಇದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ.

ವಿಶೇಷ ಸ್ಥಾನಮಾನದ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚಿಸಲಾಗುತ್ತದೆ. ಈ ಮಂಡಳಿಗೆ ಆ ಭಾಗದ ಕನಿಷ್ಠ ಇಬ್ಬರು ಶಾಸಕರನ್ನು ಸದಸ್ಯರನ್ನಾಗಿ ನೇಮಿಸಬೇಕು ಹಾಗೂ ಇದು ರೊಟೇಷನ್ ಪದ್ಧತಿಯಲ್ಲಿರಬೇಕು. ಸಂಸತ್ ಸದಸ್ಯರು ಪದನಿಮಿತ್ತ ಸದಸ್ಯರಾಗಿರಬೇಕು ಎಮದೂ ಶಿಫಾರಸು ಮಾಡಲಾಗಿದೆ.

ಹೈ.ಕ ಪ್ರದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಆ ಭಾಗದ ಜನರಿಗೆ ಶೇ 80ರಷ್ಟು ಮೀಸಲಾತಿ ಹಾಗೂ ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25ರಷ್ಟು ಮೀಸಲಾತಿ ನೀಡಬೇಕು. ಇದರಿಂದ ಆ ಭಾಗದ ವಿದ್ಯಾರ್ಥಿಗಳಿಗೆ 400 ವೈದ್ಯಕೀಯ ಸೀಟು ಮತ್ತು 18 ಸಾವಿರ ಎಂಜಿನಿಯರಿಂಗ್ ಸೀಟುಗಳು ಲಭ್ಯವಾಗಲಿವೆ.

ಸಿ ಮತ್ತು ಡಿ ಉದ್ಯೋಗಗಳಲ್ಲಿ ಶೇ 80ರಷ್ಟು ಹಾಗೂ ಎ ಮತ್ತು ಬಿ ದರ್ಜೆ ಉದ್ಯೋಗದಲ್ಲಿ ಶೇ 25ರಷ್ಟು ಮೀಸಲಾತಿ ಕೊಡಬೇಕು ಎಂದು ಸಮಿತಿ  ಶಿಫಾರಸು ಮಾಡಿದ್ದಾಗಿ ಉನ್ನತ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT