ADVERTISEMENT

‘ಹೊಡ್ದು ಬಡ್ದು ಸ್ಟೇಷನ್ನದಾಗ ಕೆಲ್ಸಾ ಮಾಡಸ್ತಿದ್ರು...’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಗೋವಾದಿಂದ ವಾಪಸ್ಸಾಗಿರುವ ಲಕ್ಷ್ಮೇಶ್ವರ ಸಮೀಪದ ಹರದಗಟ್ಟಿ ಗ್ರಾಮದ ಲಂಬಾಣಿ ಮಹಿಳೆಯರು
ಗೋವಾದಿಂದ ವಾಪಸ್ಸಾಗಿರುವ ಲಕ್ಷ್ಮೇಶ್ವರ ಸಮೀಪದ ಹರದಗಟ್ಟಿ ಗ್ರಾಮದ ಲಂಬಾಣಿ ಮಹಿಳೆಯರು   

ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ದುಡ್ಯಾಕಂತ ಗೋವಾಕ್ಕ ಹೋಗಿದ್ವಿ. ಆದ್ರ ಅಲ್ಲಿನ ಪೊಲೀಸರು ನಾವು ಹೆಣ್ಣ ಮಕ್ಳು ಅಂತಾನೂ ನೋಡ್ದ ಹಿಗ್ಗಾಮುಗ್ಗಾ ಹೊಡೀತಿದ್ರು. ಯಾಕಂತ ಕೇಳಿದ್ರ ಜೀಪಿನ್ಯಾಗ ಹತ್ತಸಗೊಂಡ ಹೋಗಿ, ಪೊಲೀಸ್ ಸ್ಟೇಷನ್ನದಾಗ ಕೆಲಸ ಮಾಡಸತಿದ್ರೀ...’

ಗೋವಾದಿಂದ ಇತ್ತೀಚೆಗೆ ತಾಂಡಾಕ್ಕೆ ವಾಪಸ್ಸಾಗಿರುವ ಹರದಗಟ್ಟಿ ಗ್ರಾಮದ ಸಾವಕ್ಕ ಲಮಾಣಿ, ಅಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ತೋಡಿಕೊಂಡಿದ್ದು ಹೀಗೆ.

ಸತತ ಬರದಿಂದ, ಜಿಲ್ಲೆಯ ಲಂಬಾಣಿ ತಾಂಡಾಗಳಿಂದ ಹಲವರು ಕೆಲಸ ಹುಡುಕಿಕೊಂಡು ಗೋವಾಕ್ಕೆ ಗುಳೆ ಹೋಗಿದ್ದಾರೆ. ಈ ಭಾಗದ ಸೂರಣಗಿ, ಸುವರ್ಣಗಿರಿ, ಉಂಡೇನಹಳ್ಳಿ, ಹರದಗಟ್ಟಿ, ಅಡರಕಟ್ಟಿ, ಶೆಟ್ಟಿಕೇರಿ, ಉಳ್ಳಟ್ಟಿ, ಮುನಿಯನ ತಾಂಡಾಗಳಿಂದಲೂ ಸಾವಿರಾರು ಮಂದಿ ಅಲ್ಲಿಗೆ ಹೋಗಿದ್ದರು. ಆದರೆ, ಇತ್ತೀಚೆಗೆ ಗೋವಾದ ಬೈನಾ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರ 55 ಮನೆಗಳನ್ನು ಅಲ್ಲಿನ ಸರ್ಕಾರ ತೆರವುಗೊಳಿಸಿದ್ದರಿಂದ, ಅವರೆಲ್ಲ ಊರಿಗೆ ಮರಳಿದ್ದಾರೆ.

ADVERTISEMENT

‘ದಿನಕ್ಕ ಐನೂರು ರೂಪಾಯಿ ಕೂಲಿ ಬರತೈತಿ. ಆದರ ದುಡದ ತಿನ್ನಾಕ ಅಲ್ಲಿ ನಮ್ಗ ಬಿಡಾಕತ್ತಿಲ್ಲ. ಅಲ್ಲಿ ಪೊಲೀಸ್ರು ನಮ್ನ ಹುಡುಕಿ, ಹುಡುಕಿ ಹೊಡ್ಯಾಕತ್ತಾರ. ಹಿಂಗಾಗಿ, ಗೋವಾ ಅಂದ್ರ ತಾಂಡಾದ ಹೆಣ್ಣುಮಕ್ಕಳು ಅಂಜುವಂಗ ಆಗೇತಿ. ಇಲ್ಲಿನೂ ದುಡ್ಯಾಕ ಕೆಲಸ ಸಿಗವಲ್ದು’ ಎಂದು ಉಳ್ಳಟ್ಟಿ ತಾಂಡಾದ ಪರಮೇಶ್ವರ ಲಮಾಣಿ ಅಳಲು ತೋಡಿಕೊಂಡರು.

‘ಗೋವಾದಾಗ ಸಾಕಷ್ಟು ಕೆಲಸ ಐತಿ. ಆದ್ರ ಅಲ್ಲಿ ಕನ್ನಡದವರು ಅಂದ್ರ ಕೀಳಾಗಿ ನೋಡ್ತಾರ್ರೀ. ಕದ್ದುಮುಚ್ಚಿ ಕೆಲಸಕ್ಕ ಹೋಗೋ ಪರಿಸ್ಥಿತಿ ಬಂದಿತ್ರೀ’ ಎಂದು ಹರದಗಟ್ಟಿಯ ಕೂಲಿ ಕಾರ್ಮಿಕ ಇಬ್ರಾಹಿಂ, ಅಕ್ಕಿಗುಂದ ತಾಂಡಾದ ರವಿ ಲಮಾಣಿ ಅಲವತ್ತುಕೊಂಡರು.
‘ಇಲ್ಲಿ ನಮಗ ಈಗ ಉದ್ಯೋಗ ಖಾತ್ರಿ ಕೆಲ್ಸಾನೂ ಸಿಗೋದಿಲ್ಲ. ಸದ್ಯಕ್ಕ ಖಾಲೀನ ಅದೇವಿ. ಆದ್ರ ಈ ವರ್ಷ ಚಲೋ ಮಳಿ ಆಗಿದ್ದಕ್ಕ ಹೊಲದಾಗ ಕೆಲಸ ಸಿಗತೈತಿ. ಮುಂದಿನ ದಿನಾ ಹೆಂಗ್‌ ಅದಾವೋ ಏನೋ?’ ಎಂದು ನಿಟ್ಟುಸಿರು ಬಿಟ್ಟರು.

–ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.