ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ಚೀರನಹಳ್ಳಿ ಮತ್ತು ಕಂಬದ ದೇವರಹಟ್ಟಿ ಸಮೀಪದ ಹೊಲದಲ್ಲಿ ಭಾನುವಾರ ಬೆಳಿಗ್ಗೆ ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿ ಹಿಡಿದ ಚಿರತೆಯು ನಂತರ ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿತು.
ಗ್ರಾಮದ ಮುರುಗೇಂದ್ರಪ್ಪ ಮತ್ತು ನಾಗರಾಜ್ ಎಂಬುವವರು ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಬದುವಿನ ಮೇಲೆ ನಡೆದು ಬರುತ್ತಿದ್ದ ಚಿರತೆಯನ್ನು ನೋಡಿದರು. ಮುರುಗೇಂದ್ರಪ್ಪ ಭಯದಿಂದ ಕಿರುಚಿಕೊಂಡಾಗ ಅಕ್ಕಪಕ್ಕದ ಹೊಲದಲ್ಲಿದ್ದ ರೈತರೂ ಬಂದರು. ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮದ ಜನರ ಗುಂಪು ಸ್ಥಳದಲ್ಲಿ ಜಮಾಯಿಸಿತು. ಅಷ್ಟು ಹೊತ್ತಿಗಾಗಲೇ ಚಿರತೆ ಮೆಕ್ಕೆಜೋಳದ ಹೊಲದಲ್ಲಿ ಬಂದು ಮಲಗಿತ್ತು.
ನೂರಾರು ಜನ ಕೇವಲ ಮೂರು-ನಾಲ್ಕು ಮೀಟರ್ ಅಂತರದಲ್ಲಿ ನಿಂತು ನೋಡಿದರೂ ಚಿರತೆ ಏಳುತ್ತಿರಲಿಲ್ಲ. ಜನರ ಗಲಾಟೆ ಜೋರಾದಂತೆ ನಿಧಾನವಾಗಿ ನಡೆದು ಹೋಗುತ್ತಿತ್ತು. ಚಿರತೆಯ ಹಿಂದೆಯೇ ಜನರೂ ಹೋಗುತ್ತಿದ್ದರು. ಸುತ್ತಲಿನ ಎಲ್ಲಾ ಹೊಲಗಳಲ್ಲಿಯೂ ಮೆಕ್ಕೆಜೋಳ ಇದ್ದುದರಿಂದ ಚಿರತೆ ತಪ್ಪಿಸಿಕೊಳ್ಳಬಹುದು ಎಂದು ಜನ ತೆಂಗಿನ ಮರಗಳನ್ನು ಹತ್ತಿ ಕಾಯುತ್ತಿದ್ದರು.
ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಬಂದರು. ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹಂದಿ ಹಿಡಿಯುವ ಬಲೆಗಳನ್ನು ಬಳಸಿ ಗ್ರಾಮಸ್ಥರ ನೆರವಿನಿಂದ ಚಿರತೆಯನ್ನು ಹಿಡಿದರು. ಬಲೆ ಹಾಕುವಾಗ ಚಿರತೆಯು ದಿನೇಶ್ ಎಂಬ ಯುವಕನ ಬೆರಳು ಕಚ್ಚಿ ಗಾಯಗೊಳಿಸಿತು.
ಹೃದಯಾಘಾತದಿಂದ ಸಾವು: ಸೆರೆ ಸಿಕ್ಕ ಚಿರತೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ವಲಯ ಅರಣ್ಯಾಧಿಕಾರಿ ಎಸ್. ನರಸಿಂಹಮೂರ್ತಿ ತಿಳಿಸಿದರು. ಇದು ಪಕ್ಕದ ಕಾಡಿನಿಂದ ಇಲ್ಲಿಗೆ ಬಂದಿದ್ದು, ಸುಮಾರು 6 ವರ್ಷದ ಪ್ರಾಯದ್ದಿರಬಹುದು. ಚಿರತೆ ಹಿಡಿಯುವಾಗ ಯಾರೂ ಅದಕ್ಕೆ ಹೊಡೆಯಲಿಲ್ಲ. ಅದು ಮಂಕಾಗಿ ಇದ್ದುದನ್ನು ನೋಡಿದರೆ ಹಿಡಿಯುವುದಕ್ಕೆ ಮೊದಲೇ ಸಣ್ಣದಾಗಿ ಹೃದಯಾಘಾತ ಆಗಿರುವ ಶಂಕೆಯೂ ಇದೆ ಎಂದು ಅವರು ತಿಳಿಸಿದರು.
ಚಿತ್ರದುರ್ಗದಲ್ಲಿ ಶವಪರೀಕ್ಷೆ ಮಾಡಿಸಿ ಚಿರತೆಯನ್ನು ಸುಡಲಾಯಿತು. ಸಿಪಿಐ ನಟರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.