ಬೆಂಗಳೂರು:ಪ್ರಸಕ್ತ ಸಾಲಿನಲ್ಲಿ ರಾಜ್ಯದ 11 ಸ್ಥಳಗಳಲ್ಲಿ 49 ಸಾವಿರ ಟನ್ ಸಾಮರ್ಥ್ಯದ ಉಗ್ರಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ತಿಳಿಸಿದರು.
ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಆರ್‌ಐಡಿಎಫ್) ಅಡಿಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಉಗ್ರಾಣ ನಿಗಮಕ್ಕೆ ನೆರವು ನೀಡುತ್ತಿದೆ. ಇದರಡಿ ಕಳೆದ ವರ್ಷ ರೂ50 ಕೋಟಿ ದೊರೆತಿತ್ತು ಎಂದು ವಿವರಿಸಿದರು.
545 ಹುದ್ದೆಗಳು ಖಾಲಿ
ರಾಜ್ಯದ 129 ಕಡೆ ನಿಗಮದ ಉಗ್ರಾಣಗಳಿದ್ದು, 10.9 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. 2011-12ನೇ ಸಾಲಿನಲ್ಲಿ ರೂ2.40 ಕೋಟಿ ಲಾಭ ಗಳಿಸಿದೆ. 545 ಹುದ್ದೆಗಳು ಖಾಲಿ ಉಳಿದಿದ್ದು, ಅಗತ್ಯಕ್ಕೆ ತಕ್ಕಂತೆ ಮಾತ್ರ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಿಗಮದ ಉಗ್ರಾಣಗಳನ್ನು ಬಳಸಿಕೊಳ್ಳುವ ರೈತರಿಗೆ ದಾಸ್ತಾನು ಶುಲ್ಕದಲ್ಲಿ ಶೇ 15, ಮಹಿಳಾ ರೈತರಿಗೆ ಶೇ 20, ಪರಿಶಿಷ್ಟ ರೈತರಿಗೆ ಶೇಕಡಾ 25ರಷ್ಟು ರಿಯಾಯಿತಿ ನೀಡಲಾಗುವುದು. ದಾಸ್ತಾನು ಮಾಡಿದ ಸರಕುಗಳಿಗೆ ಸಂಪೂರ್ಣ ಭದ್ರತೆ ಒದಗಿಸಿ ವೈಜ್ಞಾನಿಕವಾಗಿ ಸಂರಕ್ಷಿಸಲಾಗುವುದು ಹಾಗೂ ವಿಮೆ ಸೌಲಭ್ಯ ಒದಗಿಸಲಾಗುವುದು. ರೈತರು ಉಗ್ರಾಣದ ರಶೀದಿಗಳ ಆಧಾರದ ಮೇಲೆ ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಬಹುದಾಗಿದೆ ಎಂದರು.
ಸಹಕಾರ ಬ್ಯಾಂಕ್‌ಗಳಲ್ಲಿ ಕಬ್ಬು ಬೆಳೆಗಾರರು ಪಡೆದ ಬೆಳೆ ಸಾಲ ಮರುಪಾವತಿಸುವ ಅವಧಿಯನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದರು. ವ್ಯವಸ್ಥಾಪಕ ನಿರ್ದೇಶಕ ಪಿ.ಆರ್. ಶಿವಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.