ADVERTISEMENT

ಹೊಸ ಸಾಫ್ಟ್‌ವೇರ್‌: ಕೆಪಿಎಸ್‌ಸಿಗೆ ಸಿಐಡಿ ಸಲಹೆ

ರವೀಂದ್ರ ಭಟ್ಟ
Published 8 ಡಿಸೆಂಬರ್ 2013, 19:54 IST
Last Updated 8 ಡಿಸೆಂಬರ್ 2013, 19:54 IST

ಬೆಂಗಳೂರು: 2011ನೇ ಸಾಲಿನ ಗೆಜೆ­ಟೆಡ್‌ ಅಧಿಕಾರಿಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಸಾಕಷ್ಟು ಅಕ್ರಮ ನಡೆದಿರುವುದರಿಂದ ಅಕ್ರಮದಲ್ಲಿ ಭಾಗಿಯಾದವರನ್ನು ಹೊರ­­ಗಿ­ಟ್ಟು ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ ನಡೆಸುವಂತೆ ಸಿಐಡಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದಲ್ಲದೆ ಕೆಪಿಎಸ್‌ಸಿಯ ಪರೀಕ್ಷಾ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕ­ವಾಗಿರ­ಬೇಕು ಎಂದೂ ಹೇಳಿದೆ.

2011ರ ನೇಮಕಾತಿ ಪ್ರಕ್ರಿಯೆಗೆ ಸಂಬಂ­ಧಿಸಿದಂತೆ ಹಲವಾರು ದೂರು­ಗಳು ಬಂದಿದ್ದು ಅವುಗಳನ್ನು ತನಿಖೆ ಮಾಡಿದ ನಂತರ ಈಗಾಗಲೇ ನಡೆದಿ­ರುವ ಮುಖ್ಯಪರೀಕ್ಷೆ ಮೌಲ್ಯಮಾಪನ ಮತ್ತು ಸಂದರ್ಶನವನ್ನು ರದ್ದು ಮಾಡ­ಬೇಕು ಎಂದು ಸಿಐಡಿ ಶಿಫಾರಸು ಮಾಡಿದೆ.
ಮೌಲ್ಯಮಾಪಕರ ಆಯ್ಕೆಯಿಂದಲೇ ಅಕ್ರಮ ನಡೆದಿದೆ. ಸಾಕಷ್ಟು ಮಂದಿ ತಜ್ಞರು ಇದ್ದರೂ ಬೇರೆ ಯಾರ್‍್ಯಾರಿಂ­ದಲೋ ಮೌಲ್ಯಮಾಪನ ಮಾಡಲಾ­ಗಿದೆ. ಈ ಹಿನ್ನೆಲೆಯಲ್ಲಿ ಈಗ ಮೌಲ್ಯ­ಮಾಪನ­ದಲ್ಲಿ ಭಾಗಿಯಾದವರನ್ನು ಬಿಟ್ಟು ಬೇರೆಯವರಿಂದ ಮೌಲ್ಯಮಾ­ಪನ ನಡೆಸುವಂತೆ ಸಿಐಡಿ ಹೇಳಿದೆ. ಅದೇ ರೀತಿ ಈಗ ಸಂದರ್ಶನ ನಡೆಸಿದವರನ್ನು ಬಿಟ್ಟು ಬೇರೆಯವರಿಂದ ಸಂದರ್ಶನ ನಡೆ­ಸು­ವಂತೆಯೂ ಸಿಐಡಿ ಹೇಳಿದೆ.

ಇದಲ್ಲದೆ ಕೆಪಿಎಸ್‌ಸಿ ಕೊಳೆ ತೊಳೆ­ಯಲು ಸಿಐಡಿ ಇನ್ನೂ ಹಲವಾರು ಶಿಫಾ­ರಸು­ಗಳನ್ನು ಮಾಡಿದ್ದು ಅವು  ಹೀಗಿವೆ.

* ಕೆಪಿಎಸ್‌ಸಿ ಈಗ ನಡೆಸುತ್ತಿರುವ ಪರೀಕ್ಷಾ ವಿಧಾನದಲ್ಲಿ ಸಾಕಷ್ಟು ಲೋಪ­ದೋಷ­ಗಳು ಇರುವುದರಿಂದ ಪರೀಕ್ಷಾ ಪದ್ಧತಿಗೆ ಸುಧಾರಣೆ ತರುವುದು ಅಗತ್ಯವಾಗಿದೆ.

* ಕೆಪಿಎಸ್‌ಸಿ ಮ್ಯಾನ್ಯುಯಲ್‌ 30 ವರ್ಷಗಳಷ್ಟು ಹಳೆಯದಾಗಿದೆ. ಅಲ್ಲದೆ ಕರ್ನಾ­ಟಕ ಪ್ರೊಬೇಷನರ್ಸ್‌ (ಸ್ಪರ್ಧಾ­ತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮ 1997ಕ್ಕೆ ಕೂಡ ತಿದ್ದುಪಡಿ ತರುವ ಅಗತ್ಯವಿದೆ.

* ಅಕ್ರಮಗಳು ನಡೆದರೆ ಸಾಮೂ­ಹಿಕ ಜವಾಬ್ದಾರಿಯ ಜೊತೆಗೆ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ, ಸಂಬಂ­ಧಿಸಿದ ಅಧಿಕಾರಿಗಳನ್ನು ನಿರ್ದಿಷ್ಟ­ವಾಗಿ ಹೊಣೆಗಾರರನ್ನಾಗಿಸಬೇಕು.

* ಪರೀಕ್ಷೆ ಪ್ರಕ್ರಿಯೆಯ ಯಾವ ಯಾವ ಹೊಣೆಯನ್ನು ಯಾರು ಯಾರು ಹೊತ್ತಿರುತ್ತಾರೆ ಎನ್ನುವುದನ್ನು ಬಹಿ­ರಂಗಗೊಳಿಸಬೇಕು.

* ಆಯೋಗ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳೂ ಮತ್ತು ಪ್ರಕ್ರಿಯೆಗಳನ್ನು ಹಾಗೂ ಆಯೋಗದ ಪರವಾಗಿ ಕೈಗೊ­ಳ್ಳುವ ನಿರ್ಧಾರಗಳ ಪ್ರಕ್ರಿಯೆಗಳನ್ನೂ ಬಹಿರಂಗಗೊಳಿಸಬೇಕು.

* ಮುಖ್ಯ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಎಲ್ಲ ವಿವರಗಳನ್ನೂ ಬಹಿರಂಗಗೊಳಿಸಬೇಕು. ಮೌಲ್ಯ­ಮಾಪ­ಕ­ರ ಆಯ್ಕೆ, ಅವರ ಅರ್ಹತೆಗಳೂ ಬಹಿ­ರಂಗ­ವಾಗಬೇಕು.

* ಅಂಕಗಳ ಎಣಿಕೆ ಮತ್ತು ಮರು ಎಣಿ­ಕೆಯ ಪ್ರತಿಯೊಂದು ನಡೆಯನ್ನೂ ಬಹಿರಂಗಗೊಳಿಸಬೇಕು.

* ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧ­­­­ರಿಸುವ ಎಲ್ಲ ಪ್ರಮಾಣ ಪತ್ರಗಳನ್ನು ತಪಾಸಣೆ ಮಾಡುವ ಕ್ರಿಯೆ ಕೂಡ ಬಹಿ­ರಂಗಗೊಳ್ಳಬೇಕು.

* ಸಂದರ್ಶನದ ಪ್ರಕ್ರಿಯೆ, ಅಂಕಗಳ ದಾಖಲೆ ಹೇಗೆ ಎನ್ನುವುದನ್ನೂ ಬಹಿರಂಗ­ಗೊಳಿಸಬೇಕು.

* ಇನ್ನಷ್ಟು ಪಾರದರ್ಶಕತೆ ತರಲು ಸಂದರ್ಶನ ಕೋಣೆ, ಮುಖ್ಯ ಪರೀಕ್ಷಾ ಕೊಠಡಿ ಸೇರಿದಂತೆ ಉದ್ಯೋಗ ಸೌಧದ ಎಲ್ಲ ಕಡೆ ಸಿಸಿಟಿವಿ ಅಳವಡಿಸಬೇಕು. ನೇಮಕಾತಿ ಪ್ರಕ್ರಿಯೆಯ ಎಲ್ಲ ಪ್ರಮುಖ ಅಂಶಗಳನ್ನೂ ಸಿಸಿಟಿವಿ ದಾಖಲಿಸಿ­ಕೊಳ್ಳು­ವಂತೆ ಇರಬೇಕು. ಪ್ರತಿ ದಿನ ಸಿಸಿಟಿವಿ­ಯಲ್ಲಿ ದಾಖಲಾಗುವ ದೃಶ್ಯಗಳನ್ನು ಆಯಾ ದಿನವೇ ಶೇಖರಿಸಿ ಭದ್ರತೆಯಲ್ಲಿ ಇಡ­ಬೇಕು. ಇದು ಕೆಪಿಎಸ್‌ಸಿ ಕಾರ್ಯ­ದರ್ಶಿ ಅಥವಾ ಈ ಕೆಲಸಕ್ಕೆ ನೇಮಕ­ವಾ­ಗುವ ಅಧಿಕಾರಿಯ ನಿರ್ದಿಷ್ಟ ಕರ್ತವ್ಯ­ವಾಗಬೇಕು.

* ಅಂಕ ಮತ್ತು ಉತ್ತರ ಪತ್ರಿಕೆ­ಗಳನ್ನು ತಿರುಚುವ, ತಿದ್ದುವ ಮತ್ತು ಅಳಿಸಲು ಸಾಧ್ಯವಾಗದ ಸಾಫ್ಟ್ ವೇರ್‌ ಅನ್ನು ಎನ್‌ಐಸಿ ಅಥವಾ ಸಿ–ಡಿಎಸಿ ಮೂಲಕ ಅಭಿವೃದ್ಧಿಪಡಿಸಬೇಕು. ಮೌಲ್ಯ­­ಮಾಪನ ಸಂದರ್ಭದಲ್ಲಿ 1, 2 ಮತ್ತು ಮೂರನೇ ಮೌಲ್ಯಮಾಪಕರಿಗೆ ಉತ್ತರ ಪತ್ರಿಕೆಗಳನ್ನು ಹಂಚುವಾಗ ಈ ಸಾಫ್ಟ್‌ ವೇರ್‌ ಬಳಸಬೇಕು. ಅಲ್ಲದೆ ಸಂದರ್ಶನ ಸಮಿತಿಗೆ ಅಭ್ಯರ್ಥಿಗಳನ್ನು ಹಂಚುವಾಗಲೂ ಇದೇ ಸಾಫ್ಟ್ ವೇರ್‌ ಬಳಕೆ ಮಾಡಬೇಕು.

* ಉತ್ತರ ಪತ್ರಿಕೆಯಲ್ಲಿ ನೀಡಲಾದ ಎಲ್ಲ ಅಂಕಗಳ ಎಣಿಕೆ ಮತ್ತು ಸಂದ­ರ್ಶನದಲ್ಲಿ ಅಂಕ ನೀಡಲು ಪ್ರತ್ಯೇಕ ಸಾಫ್ಟ್‌­­ವೇರ್‌ ಅಭಿವೃದ್ಧಿಪಡಿಸಬೇಕು. ಪ್ರತ್ಯೇಕವಾಗಿ ತಿದ್ದುಪಡಿ ಮಾಡಲು ಈ ಸಾಫ್ಟ್‌ ವೇರ್‌ನಲ್ಲಿ ಅವಕಾಶ ಇರಬೇಕು. ಆದರೆ ಅದು ಉತ್ತರ ಪತ್ರಿಕೆಯಲ್ಲಿ ಇರುವ ಅಂಕದ ಮೇಲೆಯೇ ತಿದ್ದುವಂತ­ಹ­ದ್ದಾಗಿರಬಾರದು. ಇಡೀ ಪ್ರಕ್ರಿಯೆ ಯಾರ ಹಸ್ತಕ್ಷೇಪ ಇಲ್ಲದೆ ನಡೆಯು­ವಂತಿರಬೇಕು.

* ಮುಖ್ಯ ಪರೀಕ್ಷೆ ಮತ್ತು ಸಂದ­ರ್ಶನಕ್ಕೆ ಹಾಜರಾಗುವವರ  ಹಾಜರಾತಿ­ಯನ್ನು ಬಯೋಮೆಟ್ರಿಕ್‌ ವ್ಯವಸ್ಥೆ ಮೂಲಕ ಸಂಗ್ರಹಿಸಬೇಕು.

* ಡಿವಿಆರ್‌ ಮತ್ತು ಸರ್ವರ್‌ ಕೋಣೆ­ಗಳಿಗೆ ಎರಡು ಹಂತದ ಬಯೋ­ಮೆಟ್ರಿಕ್‌ ವ್ಯವಸ್ಥೆ ಇರಬೇಕು.

* 1.5 ಲಕ್ಷದಷ್ಟು ಅಭ್ಯರ್ಥಿಗಳು ಭಾಗವಹಿಸುವುದರಿಂದ ಪೂರ್ವಭಾವಿ ಪರೀಕ್ಷೆ­ಯನ್ನು ಆನ್‌ಲೈನ್‌ನಲ್ಲಿಯೇ ಮಾಡ­ಬೇಕು. 3 ಲಕ್ಷಕ್ಕೂ ಅಧಿಕ ಅಭ್ಯ­ರ್ಥಿ­ಗಳು ಭಾಗವಹಿಸುವ ಸಿಎಟಿ ಪರೀಕ್ಷೆ­ಯನ್ನೇ ಆನ್‌ಲೈನ್‌ನಲ್ಲಿ ನಡೆಸುವು­ದ­ರಿಂದ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ­ಯನ್ನು ಆನ್‌ಲೈನ್‌ನಲ್ಲಿ ನಡೆಸುವುದು ಕಷ್ಟವೇನಲ್ಲ.

ಸದಸ್ಯರ ಸಂಪರ್ಕ ಇಲ್ಲ: ಹೇಮಚಂದ್ರ
ಕೆಪಿಎಸ್‌ಸಿ ಸದಸ್ಯರು ಹಾಗೂ ಅವರ ಆಪ್ತ ಸಹಾಯಕರ ಜೊತೆಗೆ ತಾವು ಸಂಪರ್ಕ ಹೊಂದಿರಲಿಲ್ಲ ಎಂದು ಮೌಲ್ಯಮಾಪಕ ಹೇಮಚಂದ್ರ ಸ್ಪಷ್ಟಪಡಿಸಿದ್ದಾರೆ.

ಕೆಲವು ಅಭ್ಯರ್ಥಿಗಳೊಂದಿಗೆ ತಾವು ಸಂಪರ್ಕ ಹೊಂದಿರುವ ವಿಚಾರ ಸಿಐಡಿ ವರದಿಯಲ್ಲಿ ಇದೆ. ಇದು ಸತ್ಯವೂ ಹೌದು. ಆದರೆ ಆ ಅಭ್ಯರ್ಥಿಗಳು ಬಹಳ ವರ್ಷದಿಂದ ತಮ್ಮ ಶಿಷ್ಯರಾಗಿದ್ದರು. ಅವರು ಯಾವ ಉದ್ದೇಶದಿಂದ ತಮ್ಮನ್ನು ಸಂಪರ್ಕಿಸಿದ್ದರು ಎನ್ನುವ ವಿಚಾರವನ್ನು ತಾವು ಸಿಐಡಿ ಪೊಲೀಸರಿಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

ಹೇಮಚಂದ್ರ ಅವರನ್ನು ಅಭ್ಯರ್ಥಿಗಳಾದ ಪಿ.ಎಂ.ಚಿದಂಬರ ಮತ್ತು ಎಚ್‌.ಎ.ಪ್ರಸನ್ನ ಅವರು ಮೌಲ್ಯಮಾಪನ ಸಂದರ್ಭದಲ್ಲಿ ಸಂಪರ್ಕಿಸಿದ್ದರು ಎಂದು ಸಿಐಡಿ ತನ್ನ ವರದಿಯಲ್ಲಿ ಹೇಳಿದೆ.

ಚಿದಂಬರ ಅವರು ಕೆಪಿಎಸ್‌ಸಿ ಸದಸ್ಯೆ ಮಂಗಳಾ ಶ್ರೀಧರ್‌ ಅವರ ಆಪ್ತ ಸಹಾಯಕ ಅಶೋಕ್‌ಕುಮಾರ್‌, ಗೋನಾಳ ಭೀಮಪ್ಪ ಅವರ ಏಜೆಂಟ್‌ ಅಮರನಾಥ್‌ ಮತ್ತು ಕೆಪಿಎಸ್‌ಸಿ ಉಪ ಕಾರ್ಯದರ್ಶಿ ಲಕ್ಷ್ಮಣ ಕುಕೇನ್‌ ಅವರನ್ನು ಸಂಪರ್ಕಿಸಿದ್ದರು. ಹೇಮಚಂದ್ರ ಅವರು ಇವರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಸಿಐಡಿ ವರದಿಯಲ್ಲಿ ಉಲ್ಲೇಖವಾಗಿಲ್ಲ.

(ಮುಖ್ಯಮಂತ್ರಿ ಏನಂತಾರೆ?: ನಾಳಿನ ಸಂಚಿಕೆಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.