ADVERTISEMENT

‘ಅಂಧಮಕ್ಕಳೂ ಮಹಾಕಾವ್ಯ ರಚಿಸುವಂತಾಗಬೇಕು’

‘ಉತ್ತಮ ಶಿಕ್ಷಕಿ’ ಪ್ರಶಸ್ತಿ ಪುರಸ್ಕೃತೆ ಬೆಳಗಾವಿಯ ಸುಧಾವತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST
‘ಅಂಧಮಕ್ಕಳೂ ಮಹಾಕಾವ್ಯ ರಚಿಸುವಂತಾಗಬೇಕು’
‘ಅಂಧಮಕ್ಕಳೂ ಮಹಾಕಾವ್ಯ ರಚಿಸುವಂತಾಗಬೇಕು’   

ಬೆಂಗಳೂರು:  ಅಂಧರಾಗಿರುವ ವಿಶೇಷ ಮಕ್ಕಳ ಬೌದ್ಧಿಕ ಪ್ರಪಂಚವನ್ನು ಕತೆಗಳ ಮೂಲಕ  ತೀಡಲು ಮುಂದಾಗಿದ್ದಾರೆ ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಸಹಾಯಕ ಶಿಕ್ಷಕಿ ಸುಧಾವತಿ ರಾಘವೇಂದ್ರ ಮಿಟ್ಟಿಮನಿ. ಇದಕ್ಕಾಗಿ ‘ವಿಶ್ವ  ಅಂಗವಿಕಲರ ದಿನಾಚರಣೆ’ಯ ಪ್ರಯುಕ್ತ ರಾಜ್ಯ ಸರ್ಕಾರ ನೀಡುವ ‘ಉತ್ತಮ  ಶಿಕ್ಷಕಿ’ ಪ್ರಶಸ್ತಿಗೆ  ಭಾಜನರಾಗಿದ್ದಾರೆ. ಕಥಾ ಹಾದಿಯಲ್ಲಿ ಸಾಗಿದ  ಅನುಭವಗಳನ್ನು‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ...

ನಿಮ್ಮ ಕತೆಗಳು ಅಂಧ ವಿದ್ಯಾರ್ಥಿಗಳಿಗೆ ಯಾವ ಬಗೆಯ ಸ್ಫೂರ್ತಿಯನ್ನು ನೀಡಲಿದೆ?
ಅಂಧರು ಸೇರಿದಂತೆ ಎಲ್ಲ ವಿಶೇಷ ಮಕ್ಕಳು ನಿಸರ್ಗದತ್ತವಾಗಿಯೇ ಅತ್ಯ ದ್ಭುತ ಕಾಲ್ಪನಿಕ ಶಕ್ತಿಯನ್ನು ಪಡೆದಿರು ತ್ತಾರೆ. ಇದನ್ನು ಹರಿತಗೊಳಿಸುವ ಕೆಲಸವನ್ನಷ್ಟೆ ಮಾಡುತ್ತಿದ್ದೇನೆ.  ಅಂಧಮಕ್ಕಳು ದೃಷ್ಟಿಹೀನರಾಗಿದ್ದರೂ, ಅಕ್ಷರದ ಬಗ್ಗೆ ಅಪಾರ ಒಲವಿಟ್ಟು ಕೊಂಡಿರುತ್ತಾರೆ. ಅವರನ್ನು ತಲುಪುವ ಸಲುವಾಗಿಯೇ ಅಂಧರ ಬದುಕು, ಮನಸ್ಥಿತಿಯ ಸುತ್ತವೇ ಕತೆಗಳನ್ನು  ಹೆಣೆದಿದ್ದೇನೆ. ಇದು ಮಕ್ಕಳ ಬೌದ್ಧಿಕ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಪೂರಕ ವಾಗುವುದಲ್ಲದೇ ಅವರಲ್ಲಿ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. 

ನಿಮ್ಮ ಶಾಲೆಯ ಬಗ್ಗೆ ತಿಳಿಸಿ?
ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯಡಿ 1978ರಲ್ಲಿ ಸ್ಥಾಪನೆಯಾದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯು ಅಂಧ ಮಕ್ಕಳಿಗೆ ಶಿಕ್ಷಣ, ವಸತಿಯನ್ನು ಉಚಿತವಾಗಿ ಪೂರೈಸುತ್ತಿದೆ. 1ರಿಂದ 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಸದ್ಯಕ್ಕೆ 133 ಮಂದಿ ಅಂಧ ವಿದ್ಯಾರ್ಥಿಗಳಿದ್ದಾರೆ.  ಇದಲ್ಲದೇ ಅಂಧರಿಗಾಗಿಯೇ ಉತ್ತಮ ಗ್ರಂಥಾಲಯ ಹಾಗೂ ಬ್ರೈಲ್ ಲಿಪಿಯ ಮುದ್ರಾಣಾಲಯವು ಇದೆ.

ಅಂಧ ವಿದ್ಯಾರ್ಥಿಗಳಿಗೆ  ಸಾಹಿತ್ಯ ಪುಸ್ತಕಗಳು ‘ಬ್ರೈಲ್’ ಲಿಪಿಯಲ್ಲಿ ಲಭ್ಯವಿದೆಯೇ?
ಎಲ್ಲಾ ಪ್ರಮುಖ ಕೃತಿಗಳು  ಇಲ್ಲದೇ ಇದ್ದರೂ ಕೆಲವು ಕೃತಿಗಳು ಲಭ್ಯವಿದೆ.  ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡ ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ ರಚಿಸಿರುವ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿದೆ. ಇದಲ್ಲದೇ ನನ್ನ ಎಲ್ಲ ಕತೆಗಳನ್ನು   ಬ್ರೈಲ್  ಲಿಪಿಯಲ್ಲಿ ಮುದ್ರಿಸಲು ಉತ್ಸುಕಳಾಗಿದ್ದೇನೆ.

ಅಂಧರ ಪಠ್ಯ ಕ್ರಮದಲ್ಲಿ ಸಾಹಿತ್ಯ ಸೇರ್ಪಡೆಗೊಂಡಿದೆಯೇ?
ಸಾಮಾನ್ಯ ಮಕ್ಕಳ ಪಠ್ಯಕ್ರಮದಂತೆಯೇ ಅಂಧ ವಿದ್ಯಾರ್ಥಿಗಳ ಪಠ್ಯಕ್ರಮವಿರುತ್ತದೆ. ಅದರಲ್ಲೂ ಸಾಹಿತ್ಯವನ್ನು ಅಳವಡಿಸಲಾಗಿದೆ. ಆದರೆ, ನನ್ನ ಅಂಧ ವಿದ್ಯಾರ್ಥಿಗಳು ಆಂಗ್ಲಕವಿ ‘ಜಾನ್ ಮಿಲ್ಟನ್’ ನಂತೆ ಮಹಾಕಾವ್ಯಗಳನ್ನು ರಚಿಸಬೇಕು.  ಅಂಧ ಮಕ್ಕಳು  ಕೂಡ  ಸಾಹಿತ್ಯ  ಸಾಧನೆಗೆ ಮುಂದಾಗಬೇಕು ಎಂಬುದು ನನ್ನಾಸೆ. ಅದಕ್ಕಾಗಿಯೇ ಈ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ.

ಎಷ್ಟು ಕತೆಗಳನ್ನು ಬ್ರೈಲ್ ಲಿಪಿಯಲ್ಲಿ ತರಲಿದ್ದೀರಿ?
‘ಕಣ್ಣು ತೆರೆಸಿದ ಕೆಳದಿ’, ‘ಬಾಂಧವ್ಯ’, ‘ಜಗತ್ತು ಕುರುಡು’, ‘ಪ್ರಿತ್ಸೋದ್ ತಪ್ಪಾ’ ‘ತ್ಯಾಗ’ ಕತೆಗಳನ್ನು ಬ್ರೈಲ್ ಲಿಪಿಯಲ್ಲಿ ಸದ್ಯದಲ್ಲೇ ತರಲಿದ್ದೇನೆ. ಅದು ಶಾಲೆಯ ಆವ ರಣದಲ್ಲಿರುವ ಮುದ್ರಾಣಾ ಲಯದಲ್ಲಿಯೇ ಮುದ್ರಣಗೊಳ್ಳಲಿದೆ.

ಅಂಧ ಮಕ್ಕಳು ಎದುರಿಸುತ್ತಿರುವ ಸವಾಲೇನು?
ಅಂಧ ವಿದ್ಯಾರ್ಥಿಗಳು 1 ರಿಂದ 9ನೇ ತರಗತಿಯವರೆಗೆ ಬ್ರೈಲ್  ಲಿಪಿಯಲ್ಲಿಯೇ ಪರೀಕ್ಷೆ ಬರೆಯಬಹುದು. ಮುಂದಿನ ಹಂತದ ಎಲ್ಲ ಪರೀಕ್ಷೆಗಳಿಗೆ ‘ಬರಹಗಾರ’ರನ್ನು ಅವಲಂಬಿಸಬೇಕು. ‘ಬರಹಗಾರರ’ ಕೊರತೆಯಿದ್ದು, ಇದರಿಂದ  ಮಕ್ಕಳು ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ. ಎಲ್ಲ ಪರೀಕ್ಷೆಗಳು ಬ್ರೈಲ್ ಲಿಪಿಯಲ್ಲಿಯೇ ಇರುವಂತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.