ಬೆಂಗಳೂರು: ‘ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸಿದ ದಾಸಶ್ರೇಷ್ಠರ ಕೀರ್ತನೆಗಳ ದಾಸ ಸಾಹಿತ್ಯದ 50 ಸಂಪುಟಗಳನ್ನು ಪುನರ್ ಮುದ್ರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಮತ್ತು ಲೇಖಕ ಕಾ.ತ.ಚಿಕ್ಕಣ್ಣ ಅವರಿಗೆ ‘ಕನಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ದಾಸ ಸಾಹಿತ್ಯದ ಸಂಪುಟಗಳನ್ನು ಪ್ರಕಟಿಸಲಾಗಿತ್ತು. ಆ ಸಂಪುಟಗಳ ಪ್ರತಿಗಳು ಮತ್ತೆ ಜನರಿಗೆ ಸಿಗುವಂತಾಗಬೇಕು. ಇದಕ್ಕಾಗಿ ಸಂಪುಟಗಳನ್ನು ಪುನರ್ ಮುದ್ರಿಸಲಾಗುವುದು. ಅಲ್ಲದೆ ದಾಸ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಭಾಷಾಂತರಿಸಲು ಯೋಜನೆ ಹಾಕಿಕೊಳ್ಳಲಾಗುವುದು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಸೂಚಿಸಿದ್ದೇನೆ. ಈ ಕಾರ್ಯಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ’ ಎಂದರು.
‘ಸಮಾಜದಲ್ಲಿ ಎಲ್ಲ ಕಾಲಕ್ಕೂ ಮೌಢ್ಯಗಳು ತುಂಬಿರುತ್ತವೆ. ಆದರೆ, ಯಾವುದು ಮೌಢ್ಯ, ಯಾವುದು ನಂಬಿಕೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ್ದು ಅಗತ್ಯ. ಸಮಾಜದಲ್ಲಿ ಅಸಮಾನತೆ, ಮೌಢ್ಯಗಳ ವಿರುದ್ಧ ತನ್ನ ಕೀರ್ತನೆಗಳಲ್ಲಿ ದನಿ ಎತ್ತಿದವರು ಕನಕದಾಸರು. ಅವರ ಚಿಂತನೆಗಳು ಸಾರ್ವಕಾಲಿಕ’ ಎಂದು ಹೇಳಿದರು.
ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ‘ದಾಸರ ಕೃತಿಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು. ದಾಸ ಸಾಹಿತ್ಯ ದೇಶ ಹಾಗೂ ವಿದೇಶಿ ಭಾಷೆಗಳಿಗೆ ಭಾಷಾಂತರವಾಗಬೇಕು’ ಎಂದರು.
2013ನೇ ಸಾಲಿನ ಪ್ರಶಸ್ತಿಯನ್ನು ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಮತ್ತು 2012ನೇ ಸಾಲಿನ ಪ್ರಶಸ್ತಿಯನ್ನು ಕಾ.ತ.ಚಿಕ್ಕಣ್ಣ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ರೂ 5 ಲಕ್ಷ ನಗದು, ಕನಕದಾಸರ ಪುತ್ಥಳಿ, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.