ಬೆಂಗಳೂರು: ‘ಉಗ್ರರ ಹೆಸರಿನಲ್ಲಿ ನಮ್ಮನ್ನು ಜೈಲಿಗೆ ಅಟ್ಟಿದ ಮೇಲೆ, ನನಗೆ ಮತ್ತು ನನ್ನ ಕುಟುಂಬಕ್ಕೆ ಸಮಾಜದೊಂದಿಗೆ ಇದ್ದ ಸಂಪರ್ಕ ಕಡಿದುಹೋಗಿದೆ. ಈಗ ಯಾರೂ ನಮ್ಮೊಂದಿಗೆ ಮುಕ್ತವಾಗಿ ಬೆರೆಯುತ್ತಿಲ್ಲ’ ಎಂದು ಸಿಮಿ ಉಗ್ರರೊಂದಿಗೆ ಸಂಪರ್ಕ ಇದೆ ಎಂಬ ಆರೋಪದಲ್ಲಿ 2008ರಲ್ಲಿ ಬಂಧಿತರಾಗಿದ್ದ ಸೈಯದ್ ಸಾದಿಕ್ ಸಮೀರ್ ಅಳಲು ತೋಡಿಕೊಂಡರು.
ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘2008ರಲ್ಲಿ ನನ್ನನ್ನೂ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. ಸಿಮಿ ಉಗ್ರರೊಂದಿಗೆ ನಮಗೆ ಸಂಪರ್ಕವಿದೆ ಎಂದು ಸಾಬೀತಾಗದ ಕಾರಣ ಹುಬ್ಬಳ್ಳಿ ಸೆಷೆನ್ಸ್ ನ್ಯಾಯಾಲಯ ನಾವೆಲ್ಲರೂ ನಿರಪರಾಧಿಗಳು ಎಂದು 2015ರ ಏಪ್ರಿಲ್ 30ರಂದು ತೀರ್ಪು ನೀಡಿದೆ’ ಎಂದು ಅವರು ವಿವರಿಸಿದರು.
‘ನಮ್ಮ ಬಂಧನವಾದಾಗ ಎಲ್ಲಾ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದ್ದವು. ಆದರೆ ನಾವು ನಿರಪರಾಧಿಗಳು ಎಂದು ಸಾಬೀತಾದದ್ದರ ಬಗ್ಗೆ ಮಾತ್ರ ಮೌನ ವಹಿಸಿವೆ. ನಾವು ಬಿಡುಗಡೆಯಾದದ್ದನ್ನೂ ವರದಿ ಮಾಡಿದ್ದಿದ್ದರೆ, ನಮಗಂಟಿದ್ದ ಕಳಂಕ ಸ್ವಲ್ಪವಾದರೂ ಹೋಗುತ್ತಿರಲಿಲ್ಲವೇ’ ಎಂದು ಸಮೀರ್ ಪ್ರಶ್ನಿಸಿದರು.
‘ಈಗ ಯಾರೂ ನಮ್ಮನ್ನು ಮಾತನಾಡಿಸುವುದಿಲ್ಲ. ಬಾಡಿಗೆಗೆ ಮನೆ ಸಿಗುವುದಿಲ್ಲ. ಕೆಲಸ ಇಲ್ಲ. ಅಂಗಡಿ ನಡೆಸೋಣ ಎಂದರೆ ಯಾರೂ ನಮಗೆ ಬಾಡಿಗೆಗೆ ಅಂಗಡಿ ಕೊಡುತ್ತಿಲ್ಲ. ಜೀವನ ನಡೆಸುವುದಾದರೂ ಹೇಗೆ?’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನಾಗರಿಕ ಹಕ್ಕುಗಳ ರಕ್ಷಣಾ ಸಂಘದ ರಾಜ್ಯ ಘಟಕದ ಸಂಘಟಕ ಇರ್ಶಾದ್ ಅಹ್ಮದ್ ದೇಸಾಯಿ ಮಾತನಾಡಿ, ‘ಧರ್ಮದ ಒಂದೇ ಕಾರಣಕ್ಕೆ ಮುಸ್ಲಿಮರನ್ನು ಗುಮಾನಿಯಿಂದ ನೋಡಬೇಡಿ. ಯಾವ ತಪ್ಪೂ ಮಾಡದ ಯುವಕರನ್ನು ಬಂಧಿಸಿ, ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯಿಸಿದರೆ ಅವರ ಬದುಕು ಏನಾಗಬಹುದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅನ್ಯಾಯ ಮಾಡಬೇಡಿ’: ‘ಇಸ್ಲಾಂ ಧರ್ಮದ ಕೆಲವು ಪುಸ್ತಕಗಳು ಮತ್ತು ಸಿ.ಡಿ.ಗಳು ನನ್ನೊಂದಿಗೆ ಇದ್ದವು ಎಂಬ ಕಾರಣಕ್ಕೆ ನನ್ನನ್ನು ಬಂಧಿಸಲಾಗಿತ್ತು. ಕೇವಲ ವಿಚಾರಣೆಗೆ ಎಂದು ಕರೆಸಿಕೊಂಡ ಸಿಒಡಿ (ಈಗಿನ ಸಿಐಡಿ) ಅಧಿಕಾರಿಗಳು ನನ್ನನ್ನು ಎರಡು ದಿನಗಳ ಕಾಲ ಸಿಒಡಿ ಕಚೇರಿಯಲ್ಲೇ ಇರಿಸಿಕೊಂಡಿದ್ದರು’ ಎಂದು ಸೈಯದ್ ಸಾದಿಕ್ ಸಮೀರ್ ವಿವರಿಸಿದರು.
‘ನ್ಯಾಯಾಲಯದ ಮುಂದೆ ಹಾಜರುಪಡಿಸುವಾಗ ‘ನಿನ್ನ ಬಂಧನದ ವಿಚಾರ ದೊಡ್ಡ ಸುದ್ದಿಯಾಗಿದೆ. ಬಂಧಿತರಲ್ಲಿ ಕೆಲವರು ನನಗೆ ಗೊತ್ತಿದ್ದಾರೆ ಎಂದು ಒಪ್ಪಿಕೊಂಡರೆ ಬೇಗ ಜಾಮೀನು ಸಿಗುತ್ತದೆ’ ಎಂದು ಸಿಒಡಿ ಅಧಿಕಾರಿಗಳು ಹೇಳಿದ್ದರು. ಆದರೆ ನಾನದನ್ನು ನಿರಾಕರಿಸಿದ್ದೆ. 2011ರಲ್ಲಿ ಜಾಮೀನು ದೊರೆಯುವವರೆಗೂ ಮೂರು ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು’ ಎಂದು ಅವರು ಹೇಳಿದರು.
‘ಅಷ್ಟೂ ದಿನ ನನ್ನ ಮನೆ, ಪತ್ನಿ ಮತ್ತು ಒಂದು ವರ್ಷದ ಮಗುವಿನಿಂದ ದೂರ ಇರಬೇಕಾಯಿತು. ನನ್ನ ಎರಡನೇ ಮಗು ಜನಿಸುವಾಗಲೂ ನಾನು ಜೈಲಿನಲ್ಲಿದ್ದೆ. ತಂದೆಯಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ಯಾವ ಅವಕಾಶವೂ ನನಗೆ ಸಿಗಲೇ ಇಲ್ಲ. ಯಾರಿಗೂ ಇಂತಹ ಅನ್ಯಾಯ ಮಾಡಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.
*
ಸುಳ್ಳು ಪ್ರಕರಣದ ವಿರುದ್ಧ ಎಂಟು ವರ್ಷ ಹೋರಾಡಿ ಹೈರಾಣಾಗಿದ್ದೇನೆ. ನಮ್ಮ ಪರವಾಗಿ ಬಂದಿರುವ ತೀರ್ಪಿನ ವಿರುದ್ಧ ದಯವಿಟ್ಟು ಮೇಲ್ಮನವಿ ಸಲ್ಲಿಸಬೇಡಿ ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ
- ಸೈಯದ್ ಸಾದಿಕ್ ಸಮೀರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.