ADVERTISEMENT

‘ಬಿದಾಯಿ’ಯಿಂದ ಪ್ರತ್ಯೇಕತೆಗೆ ಕುಮ್ಮಕ್ಕು

ಕೋಡಿಬೆಟ್ಟು ರಾಜಲಕ್ಷ್ಮಿ
Published 8 ನವೆಂಬರ್ 2013, 19:30 IST
Last Updated 8 ನವೆಂಬರ್ 2013, 19:30 IST

ಮಂಗಳೂರು: ‘ಹೆಣ್ಣು ಮಕ್ಕಳಿಗೆ ಸ್ವ ಉದ್ಯೋಗದ ತರಬೇತಿ ನೀಡಿ ಅವರು ಸ್ವಾವಲಂಬಿಗಳಾಗುವಂತೆ ಮಾಡುವುದನ್ನು ಬಿಟ್ಟು ಮಂಚ, ಕಪಾಟು ಕೊಟ್ಟು ಮದುವೆ ಮಾಡಿಬಿಟ್ಟರೆ ಯಾವುದೇ ಮಹಿಳೆಯ ಜೀವನ ಉದ್ಧಾರ ಆಗುವುದಿಲ್ಲ’.

ಬೆಂಗಳೂರಿನಲ್ಲಿ ಶನಿವಾರ ಆರಂಭವಾಗುತ್ತಿರುವ 7ನೇ ಅಖಿಲ ಕರ್ನಾಟಕ ಲೇಖಕಿಯರ ಸಾಹಿತ್ಯ
ಸಮ್ಮೇ­ಳನದ ಸರ್ವಾಧ್ಯಕ್ಷೆ ಸಾರಾ ಅಬೂಬಕ್ಕರ್‌ ಅವರು ರಾಜ್ಯ ಸರ್ಕಾರದ ‘ಬಿದಾಯಿ’ ಯೋಜನೆಯನ್ನು ಕಟುವಾಗಿ ಟೀಕಿಸುವುದು ಹೀಗೆ.

ಈ ಯೋಜನೆಯಿಂದ ಸರ್ಕಾರವೇ ಸಮಾಜದಲ್ಲಿ ಪ್ರತ್ಯೇಕತೆ ಹುಟ್ಟು ಹಾಕಿದಂತೆ ಆಗುತ್ತದೆ. ಅಷ್ಟೇ ಅಲ್ಲ ಇದರ ದುರುಪಯೋಗ ಕೂಡ ಆಗಬಹುದು ಎಂದು ಅವರು ಶಂಕಿಸುತ್ತಾರೆ.

ADVERTISEMENT

‘ಸರಿಯಾದ ಶಿಕ್ಷಣವಿಲ್ಲದೇ ಬರೀ ಹಣ ಕೊಟ್ಟು  ಮದುವೆ ಮಾಡುವುದ ರಿಂದ ಅಪಾಯವೇ ಜಾಸ್ತಿ. ಅಷ್ಟೇ ಏಕೆ ಮದುವೆಯಾದರೆ ಹಣ ಸಿಗುತ್ತದೆ ಎಂಬ ಆಮಿಷವೂ ಆಕೆಯ ಶಿಕ್ಷಣವನ್ನು ಮೊಟಕುಗೊಳಿಸಬಹುದು. ಮಹಿಳೆಯರು ಸಾಮಾಜಿಕವಾಗಿ ಎಷ್ಟೊಂದು ಸಾಧನೆ ಮಾಡುತ್ತಿದ್ದರೂ ಮದುವೆಯಿಂದಲೇ ಆಕೆಗೆ ಮುಕ್ತಿ ಎಂಬ ಭಾವನೆ ಇನ್ನೂ ಇರುವುದು ದುರಂತ’  ಎಂದು ಹೇಳುತ್ತಾರೆ ಅವರು.

ಸಾಹಿತ್ಯ, ಸಾಮಾಜಿಕ ವಿಷಯಗಳನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ.
  ಪ್ರ: ಮಹಿಳಾ ಸಾಹಿತ್ಯದ ಬಗ್ಗೆ ನಿಮಗೆ ಏನನಿಸುತ್ತದೆ ?

ಮಹಿಳಾ ಸಾಹಿತ್ಯ ಎಂಬ ವರ್ಗೀಕರಣ ಯಾಕೆ ಬೇಕು? ಎಲ್ಲರಂತೆಯೇ ಮಹಿಳೆಯರು ಅನುಭವಗಳನ್ನು ಬರೆಯು­ತ್ತಾರೆ. ಮಹಿಳೆಯರ ಅನುಭವಗಳನ್ನು ಗಂಡಸರು ಬರೆಯು­ವುದು ಸಾಧ್ಯವೇ ಇಲ್ಲ. ತಾಯಿಯಾಗುವ ಸಂತೋಷ­ವನ್ನು ಹೆಣ್ಣಷ್ಟೇ ಬರೆಯಬಹುದು. ಮುಸ್ಲಿಂ ಮಹಿಳೆಯರು ದೇಶ, ವಿದೇಶಗಳಲ್ಲಿ ಚೆನ್ನಾದ ಬರವಣಿಗೆ ಮಾಡುತ್ತಿದ್ದಾರೆ. ಆದರೆ ಎಲ್ಲಿ ಹೋದರೂ ಮೂಲಭೂತ­ವಾದಿಗಳು, ಮತೀಯ­ವಾದಿಗಳು ಇದ್ದೇ ಇರುತ್ತಾರೆ.  ಮಹಿಳೆಯರು ಒಳಗೇ ಬಾಯಿಮುಚ್ಚಿಕೊಂಡು ಕುಳಿತುಕೊಳ್ಳಬೇಕು ಎಂದು ಒತ್ತಡ ಹೇರುತ್ತಾರೆ. ‘ಮಹಿಳೆಗೆ ಎಲ್ಲವೂ ಸ್ವರ್ಗದಲ್ಲಿ  ಸಿಗುತ್ತದೆ; ಈ ಭೂಮಿ ಮೇಲೆ ಗಂಡನ ಸೇವೆ ಬಿಟ್ಟು ಮತ್ಯಾವುದಕ್ಕೂ ಆಸೆ ಪಡಬೇಡಿ’ ಎಂಬ ಮನೋಭಾವವನ್ನು ಮಹಿಳೆಯರ ಮನಸ್ಸಿಗೆ ತುರುಕುವ ಪ್ರಯತ್ನ ಜೋರಾಗಿಯೇ ನಡೆಯುತ್ತಿದೆ.

ಪ್ರ: ಸಾಹಿತ್ಯ ಬದಲಾವಣೆಯನ್ನು ತರುತ್ತದೆಯೇ ?
ಪ್ರಯತ್ನವನ್ನಂತೂ ಮಾಡಬಹುದಲ್ಲ. ಹಿಂದೂ ಸಮಾಜ­ದಲ್ಲಿ ವಿಧವೆಯರನ್ನು ಎಷ್ಟು ಕೀಳಾಗಿ ಕಾಣುತ್ತಿದ್ದರು! ಸತಿ ಸಹಗಮನ  ಎಂಥಾ ಕೆಟ್ಟ ಪದ್ಧತಿ! ಅವುಗಳ ವಿರುದ್ಧ ಹೋರಾಡಿ ಆ ಮೂಢನಂಬಿಕೆಯಿಂದ ಹಿಂದೂ ಸಮಾಜ ಹೊರಗೆ ಬಂದಿದೆ. ಕುದ್ರೋಳಿಯಲ್ಲಿ ಜನಾರ್ದನ ಪೂಜಾರಿ ಅವರು ಮಹಿಳೆಯರು, ಅಷ್ಟೇ ಏಕೆ, ವಿಧವೆಯರು, ದಲಿತರೂ ಕೂಡ ದೇವರನ್ನು ಪೂಜಿಸ­ಬಹುದು ಎಂಬುದನ್ನು ತೋರಿಸಿ­ಕೊಟ್ಟರು. ಹಾಗಿದ್ದರೆ ಮುಸ್ಲಿಮರು ಮೂಢ ನಂಬಿಕೆಯಿಂದ ಹೊರಗೆ ಬರುವುದು ಸಾಧ್ಯವಿಲ್ಲವೇ? ಹಾಗೆಂದು ಬರೆದರೆ ಮತೀಯವಾದಿಗಳ ಕಣ್ಣು ಕೆಂಪಾಗುತ್ತದೆ. ಈಗೀಗ ತಲಾಖ್‌ ಪಡೆದ ಹೆಣ್ಮಕ್ಕಳು ಕೋರ್ಟಿಗೆ ಹೋಗಿ ನ್ಯಾಯ ಕೇಳಬಾರದು ಎಂದೂ ಹೇಳಲಾಗುತ್ತಿದೆ.  ಇವುಗಳ ನಡುವೆಯೇ ಮೂಢನಂಬಿಕೆ ವಿರೋಧಿಸಿದ ಸಾಮರಸ್ಯ ಸಾರಿದ ಸಾಹಿತ್ಯ ಬಂದಿದೆ.  ಮುಸ್ಲಿಂ ಲೇಖಕರು 1930ರಿಂದಲೇ ಬರೆಯಲು ಶುರು ಮಾಡಿದರು. ವೈಕಂ ಬಶೀರ್‌, ಕುಟ್ಟಿ ಕೃಷ್ಣನ್‌, ತಕಳಿ ಶಿವಶಂಕರ್‌ ಪಿಳ್ಳೈ ಕೂಡ ಸಾಮರಸ್ಯದ ಬಗ್ಗೆ  ಬರೆದರು. ಮುಸ್ಲಿಂ ಹೆಂಗಸರು 1990ರಿಂದ ಬರೆದರು.  ಮಲಯಾಳಂನಲ್ಲಿ ಬಿ. ಎಂ. ಜೊಹರಾ ಬರೆದರು. ನಾನು ಬರವಣಿಗೆ ಶುರು ಮಾಡಿದೆ. ಮಹಿಳೆಯರಿಗೆ ಶಿಕ್ಷಣ ಸಿಕ್ಕಿದ್ದೇ ತಡವಾಗಿ. ನನ್ನನ್ನು ನನ್ನ ಅಪ್ಪ ಶಾಲೆಗೆ ಕಳುಹಿಸುವಾಗ ಹೇಳಿದ್ದರು, ‘ ನೀನು ಓದಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಶಾಲೆಗೆ ಕಳುಹಿಸುತ್ತಿಲ್ಲ. ನಿನ್ನನ್ನು ನೋಡಿ ನಮ್ಮ ಸಮಾಜದ ಇತರ ಹೆಣ್ಮಕ್ಕಳೂ ಶಾಲೆಗೆ ಹೋಗುವಂತಾಗಲಿ ಎಂದು ಕಳುಹಿ­ಸುತ್ತಿದ್ದೇನೆ’ ಅಂತ.  ಎಸ್‌ಎಸ್‌ಎಲ್‌ಸಿ ಮುಗಿಯು­ವವರೆಗೆ ನಾನೊಬ್ಬಳೇ ಮುಸ್ಲಿಂ ಹುಡುಗಿ. ನಾನು ಪಾಸಾ­ದಾಗ ಮಲಯಾಳಂ ಪತ್ರಿಕೆಯಲ್ಲಿ  ‘ದಕ್ಷಿಣ ಕನ್ನಡ’ದ ಮೊದಲ ಮುಸ್ಲಿಂ ಹುಡುಗಿ ಪಾಸಾದಳು ಎಂಬ ಲೇಖನ ಬಂತು.

ಪ್ರ: ನೀವು ಬರವಣಿಗೆ ಶುರು ಮಾಡಿದ ಆಶಯದ ಬಗ್ಗೆ ಹೇಳಿ.
ನಮ್ಮ ಸಮಾಜ, ಅದರಲ್ಲಿಯೂ ಮಹಿಳೆಯ ಬದುಕು ಸುಧಾರಣೆ ಆಗಬೇಕು ಎಂಬ ಆಶಯದಿಂದಲೇ ನಾನು ಬರೆಯಲು ಶುರು ಮಾಡಿದ್ದು. ಒಂದು ಸರ್ತಿ ಮಹಿಳೆಗೆ ತಲಾಖ್‌ ಕೊಟ್ಟರೆ ಮತ್ತೆ ರಾಜಿ ಆಗುವುದು ಭಾರಿ ಕಷ್ಟ. ಮತ್ತೆ ರಾಜಿ ಆಗಬಾರದು ಎಂದು ಪ್ರವಾದಿ ಹೇಳಿಲ್ಲ. ಜನರೇ ಮಾಡಿಕೊಂಡ ನಿಯಮಗಳು. ಗಂಡ – ಹೆಂಡತಿ ರಾಜಿ ಆಗುವುದನ್ನು ಯಾವುದೇ ರೀತಿ ತಡೆಯಬಾರದು ಎಂಬ ವಾಕ್ಯ ಕುರಾನ್‌ನಲ್ಲಿ ಇದೆ. ಅದನ್ನೆಲ್ಲ ಮೆತ್ತಗೆ ಬದಿಗೆ ತಳ್ಳಿ, ‘ರಾಜಿಯಾಗಬೇಕಿದ್ದರೆ ಅವಳು ಒಂದು ರಾತ್ರಿಗಾದರೂ ಇನ್ನೊಬ್ಬನನ್ನು ಮದುವೆಯಾಗಬೇಕು’ ಎಂಬ ನಿಯಮ ಹೇರಲಾಗಿದೆ. ಇದನ್ನು ಎಲ್ಲ ಮಹಿಳೆಯರೂ ಪ್ರತಿಭಟಿಸುತ್ತಾರೆ. ಅದೇ ವಿಷಯವನ್ನಿಟ್ಟುಕೊಂಡು ನಾನು ‘ಚಂದ್ರಗಿರಿಯ ತೀರದಲ್ಲಿ’ ಬರೆದೆ. ಪ್ರವಾದಿಯವರ ಕಾಲದಲ್ಲಿ ಹೆಣ್ಣುಮಗುವನ್ನು ಜೀವಂತವಾಗಿ ಗೋರಿಯಲ್ಲಿಡುತ್ತಿದ್ದರು. ಪ್ರವಾದಿಯವರು ಆ ಮಗುವನ್ನು ಎತ್ತಿಕೊಂಡು ಬಂದು ಸಾಕಿ ಮದುವೆ ಮಾಡಿದರು. ಮಾನವೀಯ ಬಾಳುವೆಯನ್ನು ಪ್ರವಾದಿ ಬದುಕಿ ತೋರಿಸಿದರು. ಮಗುವಿನ ಜವಾಬ್ದಾರಿ ತಂದೆಯದ್ದು ಎನ್ನುವುದನ್ನು ತೋರಿಸಿದ ಮಹಾನುಭಾವ ಅವರು.

ಪ್ರ: ಕನ್ನಡ ಮತ್ತು  ಮಲಯಾಳಂ ಭಾಷೆಯ ನಡುವೆ ನಿಮ್ಮ ಸಾಹಿತ್ಯ ನಡೆದು ಬಂದಿದೆ. ಯಾವುದು ಹೆಚ್ಚು ಪ್ರಭಾವ ಬೀರಿದೆ?
ನಿರಂಜನ, ಶಿವರಾಮ ಕಾರಂತರು, ಶರಶ್ಚಂದ್ರ ಚಟ್ಟೋಪಾಧ್ಯಾಯ, ಟ್ಯಾಗೋರರ ಕಾದಂಬರಿಗಳನ್ನು ಓದುತ್ತಿದ್ದೆ. ಕಾರಂತರ ಬರಹಗಳು ತುಂಬಾ ಇಷ್ಟ. ತ್ರಿವೇಣಿಯವರ ಕಾದಂಬರಿಯ ಮೂಲಕವೇ ನನಗೆ ಮಾನಸಿಕ ವೈಪರೀತ್ಯಗಳ ಬಗ್ಗೆ ಗೊತ್ತಾಯಿತು.  ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಕನ್ನಡ ಭಾಷೆಯೇ ನನ್ನ ಸಾಹಿತ್ಯಕ್ಕೆ ಬುನಾದಿ ಹಾಕಿತು. ಬಳಿಕ ಮಲಯಾಳಂ ಕೂಡ ಪ್ರಭಾವ ಬೀರಿದೆ. ಆ ಭಾಷೆ ಗೊತ್ತಿದ್ದರಿಂದ ಅನುವಾದ ಕಾರ್ಯದಲ್ಲಿ ತೊಡಗಿದೆ. ಇತ್ತೀಚೆಗೆ ಖತೀಜಾ ಮುಮ್ತಾಜ್‌ ಅವರ ‘ಮುಂಬೆಳಕು’ ಕಾದಂಬರಿ ಅನುವಾದಿಸಿದೆ. ‘ಮಹಿಳೆಯರು, ವೈದ್ಯರು ಕೂಡ ಮುಸ್ಲಿಮರು ಮಾತ್ರ ಸ್ವರ್ಗಕ್ಕೆ ಹೋಗುವುದು ಅಂತ ನಂಬಿದ್ದಾರೆ. ಹಾಗಿದ್ದರೆ ಗಾಂಧೀಜಿ, ತೆರೆಸಾ, ಟ್ಯಾಗೋರ್‌ ಸ್ವರ್ಗಕ್ಕೆ ಹೋಗಿಲ್ಲವಾ’ ಅಂತ ಆ ಕೃತಿಯ ನಾಯಕಿ ಪ್ರಶ್ನೆ ಕೇಳುತ್ತಾಳೆ.  ನಾವು ಮೂಢನಂಬಿಕೆಯಿಂದ ಮನುಷ್ಯತ್ವವನ್ನು ಮರೆಯಬಾರದು. ಸರ್ಕಾರ ಈಗ ಮೂಢನಂಬಿಕೆ ವಿರೋಧಿ ಮಸೂದೆ ಸಿದ್ಧಪಡಿಸಿದೆ. ನನ್ನ  ಪ್ರಕಾರ ಇದು ಹೆಣ್ಮಕ್ಕಳಿಗೆ ತುಂಬ ಒಳ್ಳೆದು. ಟಿ.ವಿ.ಗಳ ಜ್ಯೋತಿಷ, ವಾಸ್ತು, ಶಾಸ್ತ್ರ ಮಹಿಳೆಯರ ಯೋಚನೆಯನ್ನು ನಿರ್ಬಂಧಿಸಿವೆ. ಮಸೂದೆ ಬಂದರೆ ಸಾಲದು, ಜನರ ಮನಸ್ಸಿನಲ್ಲಿ ಜಾಗೃತಿ ಮೂಡಬೇಕು. ಶಿಕ್ಷಣದಿಂದ ಅದು ಸಾಧ್ಯ ಎಂಬುದು ಈಗ ಸುಳ್ಳಾಗಿದೆ. ಶಿಕ್ಷಣ ಇಲ್ಲದ ಬಡವರು ದುಡಿದು ತಿನ್ನುತ್ತಾ ನೆಮ್ಮದಿಯಿಂದ ಇರುತ್ತಾರೆ. ಸುಶಿಕ್ಷಿತರು, ವಿಜ್ಞಾನಿಗಳೇ ಮೂಢನಂಬಿಕೆಗೆ ಶರಣಾಗುತ್ತಿರುವುದನ್ನು ನೋಡುತ್ತಿದ್ದೇವೆ.

ಪ್ರ: ಹೊಸ ತಲೆಮಾರಿನ ಸಾಹಿತ್ಯದ ಬಗ್ಗೆ ಏನನಿಸುತ್ತದೆ?
ಅಯ್ಯೋ, ಅದಕ್ಕೂ ಮೊದಲು ಒಂದು ವಿಚಾರವಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯೇ ನಾಶವಾಗಿದೆ. ಇನ್ನು ಸಾಹಿತ್ಯ ಓದುವವರು ಎಲ್ಲಿದ್ದಾರೆ?  ಆದರೂ ಬರವಣಿಗೆ ಮಾಡುವವರಿದ್ದಾರೆ ಎನ್ನುವುದೇ ಖುಷಿ. ಕೈತುಂಬಾ ಹಣ ಮತ್ತು ತಂತ್ರಜ್ಞಾನದ ದಾಸ್ಯ ಯುವಜನತೆಯನ್ನು ಹಾಳು ಮಾಡುತ್ತಿರುವುದು ಬೇಸರ ತರುತ್ತದೆ. ಈಗಿನ ಮಕ್ಕಳಿಗೆ ‘ಮನೆಯಲ್ಲಿ ಓದುವುದು ಬೇಡ, ಬರೆಯುವುದು ಬೇಡ’ ಎಂದು ಶಿಕ್ಷಕರೇ ಹೇಳುತ್ತಿದ್ದಾರೆ. ಇಂಗ್ಲಿಷ್‌ ನಮಗೆ ಬೇಕೇ ಬೇಕು. ಆದರೆ ಏಕರೂಪ ಶಿಕ್ಷಣ ಅಗತ್ಯ. ಬಡವ ಮತ್ತು ಶ್ರೀಮಂತರ ಮಕ್ಕಳಿಗೆ ಒಂದೇ ರೀತಿ ಶಿಕ್ಷಣ ಸಿಗಬೇಕು.

ಪ್ರ: ಹೊಸದಾಗಿ ಏನು ಬರೀತಾ ಇದ್ದೀರಿ?
ಒಂದು ಕಾದಂಬರಿ ಬರೆಯುತ್ತಿದ್ದೇನೆ. ಕಾದಂಬರಿ ಬರೆಯುವವರು ಕಡಿಮೆ ಎನ್ನುತ್ತಿದ್ದಾರೆ.  ಪುಸ್ತಕವನ್ನು ಖರೀದಿಸುವವರೂ ಕಡಿಮೆ. ಖರೀದಿಸಿದ ಬಳಿಕ ಓದುವವರೂ ಕಡಿಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.