ಬೆಂಗಳೂರು: ‘ರಾಜ್ಯ ಸರ್ಕಾರದ ವತಿಯಿಂದ ರಜೆ ಇಲ್ಲದೆ ‘ಶ್ರೀ ಕೃಷ್ಣ ಜಯಂತಿ’ಯನ್ನು ಆಚರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯ ಯಾದವ ಸಂಘದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಗೊಲ್ಲರ (ಯಾದವ) ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬುಡಕಟ್ಟು ಲಕ್ಷಣಗಳಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕುರಿತು ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಪ್ರೊ.ಅನ್ನಪೂರ್ಣಮ್ಮ ಅವರು ಸಲ್ಲಿಸಿರುವ ವರದಿಯು ಸರ್ಕಾರದ ಬಳಿ ಇದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ವರದಿ ಜಾರಿಯ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು’ ಎಂದರು.
ಹಿಂದಿನ ಸರ್ಕಾರವು ಪ್ರವರ್ಗ –1ರಲ್ಲಿ ಬರುವ ಗೊಲ್ಲ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ರೂ.1 ಲಕ್ಷ ಆದಾಯ ಮಿತಿಯನ್ನು ನಿಗದಿಪಡಿಸಿತ್ತು. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಆಗುವ ತೊಂದರೆಯಾಗುತ್ತಿದೆ ಎಂದು ದೂರು ಕೇಳಿ ಬರುತ್ತಿದೆ. ಇದನ್ನು ತಪ್ಪಿಸಿ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ‘ವಿದ್ಯಾಸಿರಿ’ ಯೋಜನೆ ಮೂಲಕ ಸಮುದಾಯದ 25 ಸಾವಿರ ವಿದ್ಯಾರ್ಥಿಗಳಿಗೆ ರೂ.1,500 ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು 50 ಸಾವಿರ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗುವುದು ಎಂದರು.
ಸಮುದಾಯದ ಮಠಕ್ಕೆ ಕುಂಬಳಗೋಡು ಬಳಿ 3.20 ಎಕರೆ ಜಮೀನು ಕೇಳಲಾಗಿದೆ. ಅದನ್ನು ಮಂಜೂರು ಮಾಡಲಾಗುವುದು. ಯಾದವ ಸಮುದಾಯದ ಮಠದ ವತಿಯಿಂದ ಯಾವುದೇ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದರೆ ಅದಕ್ಕೆ ಅಗತ್ಯವಿರುವ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
‘ಸಮಾಜದಲ್ಲಿ ಶೋಷಿತ ಸಮುದಾಯದ ಜನರು ಸಂಘಟನೆಯ ಮೂಲಕ ಜಾಗೃತರಾಗಬೇಕು. ಆದ್ದರಿಂದ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಜನರು ಯಾವುದೇ ಸಮಾವೇಶ ಮಾಡಿದರೂ ಅದರಲ್ಲಿ ಭಾಗವಹಿಸುತ್ತೇನೆ. ತುಳಿತಕ್ಕೊಳಗಾದ ಸಮುದಾಯದ ಜನರು ಸಂಘಟಿತರಾಗುವ ಮೂಲಕ ಶಾಸನಬದ್ಧವಾದ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.
ರಾಜ್ಯ ಯಾದವ ಸಂಘದ ಅಧ್ಯಕ್ಷ ಬಿ.ಎಸ್.ಲಕ್ಷ್ಮೀಪತಿ ಮಾತನಾಡಿ, ‘ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಸಮುದಾಯದ ಜನರಿದ್ದಾರೆ. ಆದರೆ, ಸಮುದಾಯದ ಒಬ್ಬ ಶಾಸಕರಾಗಲಿ, ಸಚಿವರಾಗಲಿ ಸರ್ಕಾರದಲ್ಲಿ ಇಲ್ಲ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಸಮುದಾಯದ ಅಭಿವೃದ್ಧಿಗಾಗಿ ಸಮುದಾಯದಲ್ಲಿರುವ ಅರ್ಹರನ್ನು ವಿಧಾನ ಪರಿಷತ್ ಸದಸ್ಯರಾಗಿ, ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು’ ಎಂದು ಮನವಿ ಮಾಡಿದರು.
ಚಿತ್ರದುರ್ಗದ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಕೃಷ್ಣಯಾದವಾನಂದ ಸ್ವಾಮೀಜಿ, ಸಚಿವರಾದ ಎಚ್.ಆಂಜನೇಯ, ಟಿ.ಬಿ.ಜಯಚಂದ್ರ, ಕೃಷ್ಣಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ನಮ್ಮದು ನುಡಿದಂತೆ ನಡೆಯುವ ಸರ್ಕಾರ
ರಜೆ ಇಲ್ಲದೆ ಶ್ರೀ ಕೃಷ್ಣ ಜಯಂತಿ ಆಚರಿಸಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಘೋಷಿಸಿದರು. ಆಗ ರಜೆ ಬೇಕು ಎಂದು ನೆರೆದಿದ್ದ ಜನರು ಕೂಗಲಾರಂಭಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಾನು ಏನು ಹೇಳುತ್ತೇನೊ ಅದನ್ನು ಮಾಡುತ್ತೇನೆ. ಸಮಾವೇಶದಲ್ಲಿ ನೀಡಿರುವ ಭರವಸೆಯನ್ನು ಖಂಡಿತ ಈಡೇರಿಸುತ್ತೇನೆ’ ಎಂದರು.
‘ಕಷ್ಟವನ್ನು ಓದಿ ಕಷ್ಟ ಏನು ಎಂದು ತಿಳಿದುಕೊಂಡಿಲ್ಲ. ಸ್ವತಃ ಕಷ್ಟವನ್ನು ಅನುಭವಿಸಿದ್ದೇನೆ. ನಾನೂ ಹಿಂದುಳಿದ ಜಾತಿಗೆ ಸೇರಿದವನು. ಆ ಸಮುದಾಯದ ಕಷ್ಟಗಳು ಏನು ಎಂಬುದರ ಅರಿವು ನನಗಿದೆ. ಹಿಂದುಳಿದವರ, ಬಡವರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.