ಬೆಂಗಳೂರು: ‘ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ಪ್ರಥಮ ‘ಶ್ರೀ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಕವಿ ಡಾ.ಎನ್.ಎಸ್.ಲಕ್ಷ್ಮೀ-ನಾರಾಯಣ ಭಟ್ಟ ಅವರು ಆಯ್ಕೆಯಾಗಿದ್ದು, ಮಾರ್ಚ್ 23 ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಪಿ.ವಿ.ನಾರಾಯಣ ತಿಳಿಸಿದರು.
ನಗರದ ನೃಪತುಂಗ ರಸ್ತೆಯಲ್ಲಿರುವ ದಿ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಮರ್ಶಕ ಡಾ.ಜಿ.ಎಸ್.ಅಮೂರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಿ.ಎಂ.ಶ್ರೀಕಂಠಯ್ಯರ ಮೊಮ್ಮಗಳಾದ ಕಮಲಿನಿ ಶಾ.ಬಾಲೂರಾವ್ ಪ್ರತಿಷ್ಠಾನದಲ್ಲಿ ₨15 ಲಕ್ಷಗಳ ದತ್ತಿಸ್ಥಾಪಿಸಿದ್ದಾರೆ. ಇದರಿಂದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ₨1 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಜ್ಞಾನಪೀಠ, ಸರಸ್ವತಿ ಸಮ್ಮಾನ್, ಪಂಪ ಮತ್ತು ನೃಪತುಂಗ ಪ್ರಶಸ್ತಿ ಪುರಸ್ಕೃತರನ್ನು ಬಿಟ್ಟು ಉಳಿದವರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ, ತಾಳ್ತಜೆ ಡಾ.ವಸಂತಕುಮಾರ್, ಡಾ.ಎನ್.ಎಸ್.ತಾರಾನಾಥ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮತ್ತು ಡಾ.ವಿಜಯಾ ಅವರನ್ನೊಳಗೊಂಡ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.