ADVERTISEMENT

‘ಸಿ.ಎಂಗೆ ಸಾಹಿತಿಗಳ ಸಲಹೆ ಅಪಥ್ಯ’

ಭೈರಪ್ಪ ಟೀಕೆಗೆ ಸಿದ್ದರಾಮಯ್ಯ ಪ್ರತಿ ಟೀಕೆ ವಿವಾದ

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 19:30 IST
Last Updated 15 ಜೂನ್ 2015, 19:30 IST

ಬೆಂಗಳೂರು: ‘ಅಧಿಕಾರದ ಗದ್ದುಗೆ ಏರುವುದಕ್ಕೂ ಮುನ್ನ ಸಾಹಿತಿಗಳು, ಚಿಂತಕರ ಮನೆಗಳಿಗೆ ಭೇಟಿ ನೀಡಿದ್ದಲ್ಲದೆ, ಅವರ ಸಲಹೆ ಪ್ರಕಾರ ನಡೆದುಕೊಳ್ಳುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ  ಈಗ ಅದೇ ಸಾಹಿತಿಗಳ ಅಭಿಪ್ರಾಯಗಳನ್ನು ಲಘುವಾಗಿ ಪರಿಗಣಿಸುವುದರ ಮೂಲಕ ಅಗೌರವ ತೋರಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ಇಲ್ಲಿ ಟೀಕಿಸಿದರು.

‘ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಟೀಕೆ ಮಾಡಿ, ದುಡಿದು ತಿನ್ನುವ ಅಭ್ಯಾಸ ಮಾಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಅವರ ಈ ಹೇಳಿಕೆ ಬಗ್ಗೆ  ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಲಘುವಾಗಿ ಮಾತನಾಡಿರುವುದು ಸರಿಯಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉಚಿತವಾಗಿ ಅಕ್ಕಿ ಕೊಡುವ ಯೋಜನೆ ಇದೇ ಮೊದಲನೆಯದೇನೂ ಅಲ್ಲ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮೊದಲಿನಿಂದಲೂ ಇದೆ. ಇಷ್ಟಕ್ಕೂ ಈ ಯೋಜನೆಗೆ ರಾಜ್ಯದ ಪಾಲಿನ ಹಣ ಕಡಿಮೆ ಖರ್ಚಾಗುತ್ತದೆ. ರಿಯಾಯಿತಿ ದರದಲ್ಲಿ ಕೇಂದ್ರ ಸರ್ಕಾರವೇ ಅಕ್ಕಿ ಕೊಡುವುದರಿಂದ ಹೆಚ್ಚಿನ ಹೊರೆ ಬೀಳುವುದಿಲ್ಲ. ಆದರೂ ಅನ್ನಭಾಗ್ಯವನ್ನು ಹಸಿವು ನೀಗಿಸುವ ಕಾರ್ಯಕ್ರಮ ಎಂದು ಮುಖ್ಯಮಂತ್ರಿ ಬಿಂಬಿಸುತ್ತಿದ್ದಾರೆ.  ಮೊದಲ 2 ವರ್ಷ 30 ಕೆ.ಜಿ ಅಕ್ಕಿ ಕೊಟ್ಟು ಈಗ ಅದರ ಪ್ರಮಾಣ ಕಡಿಮೆ ಮಾಡಿದ್ದಾರೆ. ಇದರಿಂದ ಬಡವರ ಹೊಟ್ಟೆ ಎಷ್ಟು ತುಂಬುತ್ತಿದೆ ಎಂಬುದನ್ನು ಮೊದಲು ಜನರಿಗೆ ತಿಳಿಸಲಿ’ ಎಂದು ಅವರು ಸವಾಲು ಹಾಕಿದರು.

ಗಂಭೀರವಾಗಿ ಪರಿಗಣಿಸಬೇಕು: ‘ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಲ್ಲಿನ ಎಸ್ಪಿ ಸೋನಿಯಾ ನಾರಂಗ್‌ ಅವರು ಪತ್ರದ ಮೂಲಕ ತಿಳಿಸಿರುವುದನ್ನು ಲೋಕಾಯುಕ್ತ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
‘ಇದೊಂದು ಪ್ರಮುಖ ಪತ್ರವಾಗಿದ್ದು, ಅದರ ಮೇಲೆ ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಅದನ್ನು ಮೂಲೆಗುಂಪು ಮಾಡಬಾರದು’ ಎಂದು ಅವರು ಹೇಳಿದರು.

₨550 ಕೋಟಿ ಎಲ್ಲಿ?: ‘ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ ₨550 ಕೋಟಿಯನ್ನು ಖಾಸಗಿ ಬ್ಯಾಂಕ್‌ಗಳಲ್ಲಿ ಇಟ್ಟು ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇದುವರೆಗೂ ಕ್ರಿಮಿನಲ್‌ ಮೊಕದ್ದಮೆ ಹೂಡಿಲ್ಲ.  ಹೋಗಲಿ ಆ ಹಣ ಎಲ್ಲಿದೆ ಎಂಬುದು ಕೂಡ ಗೊತ್ತಾಗುತ್ತಿಲ್ಲ. ಇಂತಹ ಗಂಭೀರ ವಿಚಾರಗಳಲ್ಲೂ ಸರ್ಕಾರ  ಬೇಜವಾಬ್ದಾರಿತನ ತೋರಿದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಕೆಪಿಎಸ್‌ಸಿ: ಅಧಿಕಾರಿ ರಕ್ಷಣೆಗೆ ಟೀಕೆ
‘2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ನೇಮಕಾತಿ ಪಟ್ಟಿಯನ್ನು ರದ್ದುಪಡಿಸಿದ್ದ ಸರ್ಕಾರ, ಆ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿದ್ದ ಸುಂದರ್‌ ಎಂಬ ಅಧಿಕಾರಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಈಗ ತಪ್ಪು ಮಾಡಿದೆ. ನೇಮಕಾತಿ ಪಟ್ಟಿಯನ್ನೇ ರದ್ದುಪಡಿಸಿದ ಮೇಲೆ ಕೆಪಿಎಸ್‌ಸಿ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಂಡ ಹಾಗೆ ಅಧಿಕಾರಿ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಿತ್ತು. ಅಮಾಯಕ ಅಭ್ಯರ್ಥಿಗಳನ್ನು ಬೀದಿಗೆ ತಳ್ಳಿ ಬೇಕಾದವರಿಗೆ ರಕ್ಷಣೆ ನೀಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ರಾಜ್ಯಪಾಲರು ಕಡತಗಳನ್ನು ವಾಪಸ್‌ ಕಳುಹಿಸುತ್ತಿರುವುದು ನೋಡಿದರೆ ಈ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳಲ್ಲಿ ದೊಡ್ಡಮಟ್ಟದ ಲೋಪಗಳು ಇವೆ ಎಂಬ ಅನುಮಾನ ಬರುತ್ತಿದೆ.–ಎಚ್‌.ಡಿ.ಕುಮಾರಸ್ವಾಮಿ,ಜೆಡಿಎಸ್‌ ಅಧ್ಯಕ್ಷ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.