ADVERTISEMENT

ಕುಡಿಯುವ ನೀರಿಗೆ ₹1700 ಕೋಟಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 20:29 IST
Last Updated 28 ನವೆಂಬರ್ 2018, 20:29 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ    

ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ 27 ಸಾವಿರ ಕಾಮಗಾರಿಗಳಿಗೆ ₹1700 ಕೋಟಿ ಅನುದಾನವನ್ನು ಜಿಲ್ಲಾ ಪಂಚಾಯ್ತಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಈ ಕಾಮಗಾರಿಗಳಿಗೆ ಡಿಸೆಂಬರ್‌ 31 ರೊಳಗೆ ಟೆಂಡರ್‌ ಕರೆದು, ಕಾರ್ಯಾದೇಶ ಪತ್ರಗಳನ್ನೂ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ಆಗಸ್ಟ್‌ನಲ್ಲೇ ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಲು ಜಿಲ್ಲಾ ಪಂಚಾಯ್ತಿಗಳಿಗೆ ಸೂಚಿಸಲಾಗಿತ್ತು. ಎಲ್ಲ ಕ್ರಿಯಾ ಯೋಜನೆಗಳೂ ಬಂದಿದ್ದು, ಅವುಗಳಿಗೆ ಒಪ್ಪಿಗೆ ನೀಡಲಾಗಿದೆ. ಮಾರ್ಚ್‌ 31 ರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದರು.

ADVERTISEMENT

ನೀರು ಲಭ್ಯತೆ ಇಲ್ಲದಾಗ ತಕ್ಷಣವೇ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಜಿಲ್ಲಾ ಪಂಚಾಯ್ತಿ ಅಧೀನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಜಿಲ್ಲಾ ಪಂಚಾಯ್ತಿಗಳೇ ಭರಿಸಲಿವೆ ಎಂದು ಹೇಳಿದರು.

ಉಳಿಕೆ ಅನುದಾನ ಬಳಕೆ: ಕಳೆದ ಸಾಲಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೀಸಲಿಟ್ಟ ಹಣದಲ್ಲಿ ₹647 ಕೋಟಿ ಬಳಕೆ ಆಗಿಲ್ಲ. ಅದನ್ನು ಬಳಸಿಕೊಳ್ಳಲು ಜಿಲ್ಲಾ ಪಂಚಾಯ್ತಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ ಉದ್ಯೋಗ ಸೃಷ್ಟಿಗೆ 8.50 ಕೋಟಿ ಮಾನವ ದಿನಗಳಿಂದ 10 ಕೋಟಿ ಮಾನವ ದಿನಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಪ್ರತಿಯೊಬ್ಬರಿಗೆ 100 ರಿಂದ 150 ಮಾನವ ದಿನಗಳಷ್ಟು ಉದ್ಯೋಗ ಸಿಗಲಿದೆ. ಆಸ್ತಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

**

ಗ್ರಾಮ ಪಂಚಾಯ್ತಿಗಳಲ್ಲಿ ಕಸ ವಿಲೇವಾರಿ
ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹಸಿ ಮತ್ತು ಒಣ ಕಸ ವಿಲೇವಾರಿ ಪದ್ಧತಿ ಜಾರಿಗೊಳಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.

ಈಗಾಗಲೇ ಉಡುಪಿ ಜಿಲ್ಲೆಯ 12 ಗ್ರಾಮ ಪಂಚಾಯ್ತಿಗಳಲ್ಲಿ ಒಣ ಕಸ ಬೇರ್ಪಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿ ಆಗಿದೆ. ಈ ವರ್ಷ 500 ಗ್ರಾಮ ಪಂಚಾಯ್ತಿಗಳಲ್ಲಿ ಒಣ ಕಸ ವಿಲೇವಾರಿ ಪದ್ಧತಿ ಜಾರಿಗೆ ತರಲಾಗುವುದು ಎಂದರು.

ಈಗಾಗಲೇ ಈ ಸಂಬಂಧ 91 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜನರಿಗೆ ಮನವರಿಕೆ ಮಾಡಿ ಪ್ರಾಥಮಿಕ ಕೆಲಸ ಆರಂಭಿಸಲಾಗಿದೆ. ಬಾಟಲಿ, ಗಾಜು, ಪ್ಲಾಸ್ಟಿಕ್‌ ಮುಂತಾದ ಒಣ ಕಸವನ್ನು ಮರು ಬಳಕೆ ಮಾಡಲಾಗುವುದು. ಹಳ್ಳಿಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ರೋಗ ಎಲ್ಲೆಂದರಲ್ಲಿ ವ್ಯಾಪಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.