ADVERTISEMENT

ಐಎಂಎ ವಂಚನೆ ಹಗರಣದ ತನಿಖೆ ಸಿಬಿಐಗೆ ವಹಿಸಿ: ಶೋಭಾ ಕರಂದ್ಲಾಜೆ ಆಗ್ರಹ

ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 20:23 IST
Last Updated 26 ಜೂನ್ 2019, 20:23 IST
   

ನವದೆಹಲಿ: ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ವಹಿಸುವ ಮೂಲಕ ಸಾವಿರಾರು ಜನ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಉಡುಪಿ– ಚಿಕ್ಕಮಗಳೂರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಲೋಕಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.

ಜನರಿಂದ ₹ 12,000 ಕೋಟಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಲಾಗಿತ್ತು ಎಂದು ವಂಚನೆ ಪ್ರಕರಣದ ಸೂತ್ರಧಾರಿ ಮನ್ಸೂರ್ ಅಲಿ ಖಾನ್ ಹೇಳಿಕೆ ನೀಡಿದ್ದಾನೆ. ರಾಜ್ಯದ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಹಗರಣದಲ್ಲಿ ಸಿಲುಕಿದ್ದಾರೆಂದು ಆತ ಒಪ್ಪಿಕೊಂಡಿದ್ದಾನೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ಮೂಲಕ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಇ.ಡಿ.ಗೆ ವಹಿಸಬೇಕು ಎಂದರು.

ADVERTISEMENT

ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಶಾಸಕರು, ಸಚಿವರು, ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಕೇಂದ್ರ ಸರ್ಕಾರದ ಸಂಸ್ಥೆಗಳೇ ತನಿಖೆ ನಡೆಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

ದೇಶ ತೊರೆದು, ದುಬೈನಲ್ಲಿ ತಲೆ ಮರೆಸಿಕೊಂಡಿರುವ ಮನ್ಸೂರ್‌ ಅನಿ ಖಾನ್‌ನನ್ನು ಕೂಡಲೇ ಭಾರತಕ್ಕೆ ಕರೆಸಿ ವಿಚಾರಣೆಗೆ ಒಳಪಡಿಸಬೇಕು. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಸಂತ್ರಸ್ತರಿಗೆ ಹಣ ಮರಳಿಸಬೇಕು ಎಂದು ಅವರು ಕೋರಿದರು.

ಪಾಪ್ಯುಲರ್‌ ಫ್ರಂಟ್‌ ಹಾಗೂ ಇತರ ಕೆಲವು ಸಂಘಟನೆಗಳಿಗೆ ಸೇರಿದವರು ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಟಾಡಾ ಕಾಯ್ದೆ ಅಡಿ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಈ ಹಗರಣದಲ್ಲಿ ಭಾಗಿಯಾಗಿದ್ದಾಗಿ ಗೊತ್ತಾಗಿದೆ. ಭಯೋತ್ಪಾದಕ ಸಂಘಟನೆಗಳಿಗೂ ಜನರ ಹಣವನ್ನು ಹಂಚಿರುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಮುತುವರ್ಜಿ ವಹಿಸುವ ಮೂಲಕ ಕರ್ನಾಟಕದ 40,000ಕ್ಕೂ ಅಧಿಕ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಮುಖಂಡರು ಐಎಂಎ ಸೂತ್ರಧಾರಿಯೊಂದಿಗೆ ನಂಟು ಹೊಂದಿರುವುದರಿಂದ ರಾಜ್ಯ ಸರ್ಕಾರ ಸೂಕ್ತ ರೀತಿಯ ತನಿಖೆ ನಡೆಸದೆ, ಪ್ರಕರಣವನ್ನೇ ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ರಾಜ್ಯದ ಕೆಲವು ಬಿಜೆಪಿ ಸಂಸದರೊಂದಿಗೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಅವರು, ಈ ಕುರಿತ ಮನವಿ ಸಲ್ಲಿಸಿದರು.

ಕೋಲಾರಕ್ಕೆ ನೀರು ನೀಡಿ: ಚಿನ್ನದ ಗಣಿಯಿಂದ ಹೆಸರಾಗಿರುವ ಕರ್ನಾಟಕದ ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರು ಒದಗಿಸಬೇಕು ಎಂದು ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರಿ ಸ್ವಾಮ್ಯದ ಸಿಮೆಂಟ್‌ ಕಾರ್ಖಾನೆ ಸ್ಥಗಿತಗೊಂಡಿದೆ. ಅದರ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸಂಸದ ಉಮೇಶ್‌ ಜಾಧವ್‌ ಮನವಿ ಮಾಡಿದರು.

ಪರೀಕ್ಷಾ ಪದ್ಧತಿ ಬದಲಿಸಿ

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿ ಪರೀಕ್ಷಾ ಪದ್ಧತಿ ಬದಲಿಸುವ ಮೂಲಕ, 2014ಕ್ಕೆ ಮುಂಚಿನ ಮಾದರಿಯಲ್ಲಿಯೇ ಪರೀಕ್ಷೆ ಆಯೋಜಿಸಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, 2014ರ ನಂತರ ಪರೀಕ್ಷಾ ಪದ್ಧತಿಯಲ್ಲಿ ಕೈಗೊಂಡ ಕೆಲವು ಬದಲಾವಣೆಗಳಿಂದ ಕರ್ನಾಟಕದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಅನ್ಯ ರಾಜ್ಯಗಳ ಅಧಿಕ ಸಂಖ್ಯೆಯ ಅಭ್ಯರ್ಥಿಗಳೇ ನೌಕರಿ ಗಿಟ್ಟಿಸಿಕೊಳ್ಳುವಂತಾಗಿದೆ ಎಂದರು.

ಸ್ಥಳೀಯ, ಪ್ರಾದೇಶಿಕ ಭಾಷೆಯಲ್ಲೇ ನೇಮಕಾತಿ ಪರೀಕ್ಷೆ ಆಯೋಜಿಸಿದಲ್ಲಿ ಸ್ಥಳೀಯರಿಗೆ ಅನುಕೂಲವಾಗಲಿದೆ. ಆದರೆ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಪರೀಕ್ಷೆ ಆಯೋಜಿಸುತ್ತಿರುವ ಕಾರಣ ಅನ್ಯ ರಾಜ್ಯಗಳ ಶೇ 61ರಷ್ಟು ಅಭ್ಯರ್ಥಿಗಳಿಗೆ ಲಾಭವಾಗುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಈ ಕುರಿತು ಗಮನ ಹರಿಸುವ ಮೂಲಕ ರಾಜ್ಯದ ಯುಜನರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.