ADVERTISEMENT

ಚೀನಾದವರು ವಿಕೃತ ಮನಸ್ಸಿನವರು: ಶಿವಮೂರ್ತಿ ಶರಣರ ಹೇಳಿಕೆ

ಗ್ರಹಣದಿಂದಲ್ಲ ಮಾನವರಿಂದಲೇ ಅನಾಹುತ; ಶಿವಮೂರ್ತಿ ಶರಣರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 10:56 IST
Last Updated 21 ಜೂನ್ 2020, 10:56 IST
ಸೂರ್ಯಗ್ರಹಣದ ವೇಳೆ ಚಿತ್ರದುರ್ಗದ ಮುರುಘಾಮಠದಲ್ಲಿ ಶಿವಮೂರ್ತಿ ಮುರುಘಾ ಶರಣರು ಬಸವ ಅನುಯಾಯಿಗಳಿಗೆ ಉಪಹಾರ ನೀಡುತ್ತಿರುವುದು
ಸೂರ್ಯಗ್ರಹಣದ ವೇಳೆ ಚಿತ್ರದುರ್ಗದ ಮುರುಘಾಮಠದಲ್ಲಿ ಶಿವಮೂರ್ತಿ ಮುರುಘಾ ಶರಣರು ಬಸವ ಅನುಯಾಯಿಗಳಿಗೆ ಉಪಹಾರ ನೀಡುತ್ತಿರುವುದು   

ಚಿತ್ರದುರ್ಗ: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲೆಯ ಎಲ್ಲಾ ದೇಗುಲಗಳು ಮುಚ್ಚಿದ್ದವು. ಆದರೆ, ಗ್ರಹಣ ವೀಕ್ಷಿಸಲು ಮತ್ತು ಇದೇ ವೇಳೆ ಉಪಹಾರ ಸೇವಿಸಲು ಬಸವ ಅನುಯಾಯಿಗಳಿಗೆ ಮುರುಘಾಮಠದ ಬಾಗಿಲು ತೆರೆದಿತ್ತು. ಈ ಮೂಲಕ ಗ್ರಹಣ ಅಮಂಗಲ ಅಲ್ಲ ಎಂಬ ಸಂದೇಶ ನೀಡಲು ಮುಂದಾಯಿತು.

ಗ್ರಹಣ ವೀಕ್ಷಣೆಗೆ ಎಂದೇ ತಯಾರಿಸಲಾದ ವಿಶೇಷ ಕನ್ನಡಕ ಧರಿಸಿ ಶಿವಮೂರ್ತಿ ಮುರುಘಾ ಶರಣರು ‘ಪಾರ್ಶ್ವ ಸೂರ್ಯಗ್ರಹಣ’ ವೀಕ್ಷಣೆಗೆ ಚಾಲನೆ ನೀಡಿದರು. ನಂತರ ಬಸವ ಭಕ್ತರು ಗ್ರಹಣ ವೀಕ್ಷಿಸಲು ಮುಂದಾದರು.

‘ಜ್ಯೋತಿಷಿಗಳು ಗ್ರಹಣವನ್ನೇ ಬಂಡವಾಳ ಮಾಡಿಕೊಂಡು ಸುಲಿಗೆ ಮಾಡಲು ನಿಂತಿದ್ದಾರೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಮುಗ್ಧರನ್ನು ಶೋಷಿಸುತ್ತಿದ್ದಾರೆ. ಇಂಥವರಿಗೆ ಪ್ರಚಾರ ಬೇಕು. ದೃಶ್ಯ ಮಾಧ್ಯಮಗಳಿಗೆ ಟಿಆರ್‌ಪಿ ಬೇಕು. ಇದರಿಂದಾಗಿ ಈಗಲೂ ಅನೇಕರು ವೈಚಾರಿಕತೆ ಕಡೆ ಚಿಂತಿಸದೇ ಮೋಸ ಹೋಗುತ್ತಿದ್ದಾರೆ’ ಎಂದು ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಶಿವಮೂರ್ತಿ ಶರಣರು ಪ್ರತಿಕ್ರಿಯಿಸಿದರು.

ADVERTISEMENT

‘ವಿಶ್ವದಲ್ಲಿ ಈವರೆಗೂ ಸೂರ್ಯ, ಚಂದ್ರಗ್ರಹಣದಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಮಾನವನಿಂದಲೇ ಅನಾಹುತ ಸಂಭವಿಸುತ್ತಿದೆ. ದೇಶ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅದರಿಂದ ಪಾರಾಗಲು ಪ್ರಯತ್ನಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲೇ ವಿಕೃತ ಮನಸ್ಸಿನ ಚೀನಾದವರು ಗಡಿ ವಿವಾದ ತೆಗೆದು ದುಷ್ಟ ಬುದ್ಧಿಯನ್ನು ಪ್ರಪಂಚಕ್ಕೆ ತೋರಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.