ADVERTISEMENT

ವಸೂಲಿ: ವಿಚಾರಣೆಗೆ ಆದೇಶ

ಆರ್‌ಟಿಇ ಅಡಿ ಪ್ರವೇಶ ಪಡೆದವರಿಂದ ಹಣ ಸಂಗ್ರಹಿಸಿದ ಪ್ರಕರಣ: ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 18:59 IST
Last Updated 4 ಫೆಬ್ರುವರಿ 2019, 18:59 IST

ಬೆಂಗಳೂರು: ‘ಶಿಕ್ಷಣ ಹಕ್ಕು ಕಾಯ್ದೆ’ಯಡಿ (ಆರ್‌ಟಿಇ) ಪ್ರವೇಶ ಪಡೆದ ಬಡ ಮಕ್ಕಳಿಂದ ಶಾಲಾ ಆಡಳಿತ ಮಂಡಳಿಗಳು ಹೆಚ್ಚುವರಿ ಶುಲ್ಕ ವಸೂಲು ಮಾಡುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಿ, ಕ್ರಮ ಕೈಗೊಂಡು ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಶಿಕ್ಷಣ ಇಲಾಖೆಗೆ ಆದೇಶಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಎಂಟು ಶಾಲೆಗಳು ಮಕ್ಕಳ ಪೋಷಕರಿಂದ ಪುಸ್ತಕ, ಸಮವಸ್ತ್ರ ಹಾಗೂ ಶೂ ವಿತರಿಸುವ ನೆಪದಲ್ಲಿ ₹ 1,000ದಿಂದ ₹10,000ದವರೆಗೆ ಸಂಗ್ರಹಿಸುತ್ತಿರುವ ಸಂಗತಿ ಲೋಕಾಯುಕ್ತ ಪೊಲೀಸರ ವಿಚಾರಣೆಯಿಂದ ಬಯಲಾಗಿದೆ. ಈ ವರದಿ ಆಧರಿಸಿ ಸಮಗ್ರ ವಿಚಾರಣೆ ನಡೆಸುವಂತೆ ಲೋಕಾಯುಕ್ತರು ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಬಾದಾಮಿ ಪಟ್ಟಣದ ಶಾಲೆಗಳ ವಿರುದ್ಧ ಬಂದಿದ್ದ ಅನಾಮಧೇಯ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದರು.

ADVERTISEMENT

**

ಹೆಚ್ಚುವರಿ ಶುಲ್ಕ ಪಡೆದ ಶಾಲೆಗಳ ಹೆಸರು
ಕಾಳಿದಾಸ ಶಿಕ್ಷಣ ಸಮಿತಿ ಆಂಗ್ಲ ಮಾಧ್ಯಮ ಶಾಲೆ, ಸೃಜನ ಶಾಲೆ, ಕೇಂಬ್ರಿಡ್ಜ್‌ ಸ್ಕೂಲ್‌, ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ, ವೆಲ್ಲಿಂಗ್ಟನ್‌ ಕನ್ನಡ ಮಾಧ್ಯಮ ಶಾಲೆ, ಪಟ್ಟಣಶೆಟ್ಟಿ ಶಾಲೆ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿದ್ಯಾ ವಿಜಯ ಕನ್ನಡ ಮಾಧ್ಯಮ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.