ADVERTISEMENT

ಉದ್ಯೋಗ ಖಾತರಿ: 1.60 ಕೋಟಿ ಹೆಚ್ಚುವರಿ ಮಾನವ ದಿನ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 16:01 IST
Last Updated 11 ಮಾರ್ಚ್ 2022, 16:01 IST
ಈಶ್ವರಪ್ಪ
ಈಶ್ವರಪ್ಪ   

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚುವರಿಯಾಗಿ 1.60 ಕೋಟಿ ಮಾನವ ದಿನಗಳನ್ನು ಮಂಜೂರು ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘2022–23ನೇ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳನ್ನು ಮಂಜೂರು ಮಾಡಲಾಗಿತ್ತು. ಆ ಗುರಿಯನ್ನು ಡಿಸೆಂಬರ್‌ನಲ್ಲೇ ತಲುಪಿದ್ದೆವು. ಬಳಿಕ 1.40 ಕೋಟಿ ಮಾನವ ದಿನಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಯಿತು. ಈ ಗುರಿಯನ್ನೂ ತಲುಪಿದ್ದು, ಎರಡನೇ ಬಾರಿಗೆ ಹೆಚ್ಚುವರಿ ಮಾನವ ದಿನಗಳನ್ನು ಮಂಜೂರು ಮಾಡಲಾಗಿದೆ’ ಎಂದರು.

ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಒಟ್ಟು 16 ಕೋಟಿ ಮಾನವ ದಿನಗಳ ಕೆಲಸವನ್ನು ಸೃಜಿಸಲಾಗುವುದು. ರಾಜ್ಯದಲ್ಲಿ ಕೂಲಿ ಅರಸಿ ಬಂದ ಒಬ್ಬ ಬಡವರನ್ನೂ ವಾಪಸ್‌ ಕಳುಹಿಸಿಲ್ಲ. ಮಾರ್ಚ್‌ ಅಂತ್ಯದೊಳಗೆ ಹೆಚ್ಚುವರಿ ಗುರಿಯನ್ನೂ ಸಾಧಿಸಲಾಗುವುದು. ನರೇಗಾ ಯೋಜನೆಯ ಮೂಲಕ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಿರ್ಮಾಣದ ಕೆಲಸ ಮುಂದುವರಿಸಿದೆ ಎಂದು ಹೇಳಿದರು.

ADVERTISEMENT

‘ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಬಿಲ್‌ ಪಾವತಿಗೆ ಪ್ರತ್ಯೇಕ ಅನುದಾನ ಒದಗಿಸಬೇಕು. ಈ ಉದ್ದೇಶಕ್ಕೆ ಅಭಿವೃದ್ಧಿ ಅನುದಾನ ಬಳಸಬಾರದು’ ಎಂದು ಮಂಜುನಾಥ ಭಂಡಾರಿ ಆಗ್ರಹಿಸಿದರು.

‘ಬಾಕಿ ಇರುವ ವಿದ್ಯುತ್‌ ಬಿಲ್‌ ಪಾವತಿಸುವ ಕುರಿತು ಚರ್ಚೆ ನಡೆಯುತ್ತಿದೆ. ಮುಂದೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಸೌರ ವಿದ್ಯುತ್‌ ಮೂಲಕ ಕಾರ್ಯನಿರ್ವಹಿಸುವ ವಿದ್ಯುತ್‌ ದೀಪ ಅಳವಡಿಸಲಾಗುವುದು. ಈ ಯೋಜನೆ ಈಗಾಗಲೇ ಸಿದ್ಧಗೊಂಡಿದೆ’ ಎಂದು ಈಶ್ವರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.