ADVERTISEMENT

ಮೇ 20ರಂದು 1 ಲಕ್ಷ ಡಿಜಿಟಲ್ ಹಕ್ಕು ಪತ್ರ ವಿತರಣೆ: ಸಚಿವ ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 23:30 IST
Last Updated 25 ಏಪ್ರಿಲ್ 2025, 23:30 IST
 ಕೃಷ್ಣ ಬೈರೇಗೌಡ
 ಕೃಷ್ಣ ಬೈರೇಗೌಡ   

ಬೆಂಗಳೂರು: ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವ ಹಾಡಿ, ಹಟ್ಟಿ, ತಾಂಡಾಗಳಲ್ಲಿನ ನಿವಾಸಿಗಳಿಗೆ ‘94 ಡಿ’ ಅಡಿ ಮೇ 20ರಂದು ಒಂದು ಲಕ್ಷ ಡಿಜಿಟಲ್‌ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸರ್ವೆ ಇಲಾಖೆ ಮುಖ್ಯಸ್ಥರ ಜತೆ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಎರಡು ವರ್ಷ ಪೂರ್ಣಗೊಳಿಸುತ್ತಿರುವ ಕಾರಣ ಅದೇ ದಿನ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇನ್ನು ಮುಂದೆ ಕಾಗದದ ಹಕ್ಕು ಪತ್ರಗಳ ಬದಲಿಗೆ ಡಿಜಿಟಲ್‌ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ವರ್ಷದ ಅಂತ್ಯದ ವೇಳೆಗೆ ಒಟ್ಟು ಎರಡು ಲಕ್ಷ ಹಕ್ಕುಪತ್ರಗಳನ್ನು ವಿತರಿಸುವ ಗುರಿ ಇದೆ ಎಂದರು.

ADVERTISEMENT

‘ಹಲವು ಹಾಡಿ, ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಆದರೆ, ಅಲ್ಲಿನ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ಅವರು ತೊಂದರೆಗೆ ಸಿಲುಕಿದ್ದಾರೆ. ಅಲ್ಲಿನ ವಾಸಿಗಳಿಗೆ ಶಾಶ್ವತ ಹಕ್ಕುಪತ್ರ ನೀಡುವ ಉದ್ದೇಶದಿಂದ 2016ರಲ್ಲೇ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷ ಹಕ್ಕು ಪತ್ರಗಳನ್ನು ಮಾತ್ರ ವಿತರಿಸಲಾಗಿದೆ. ನಮ್ಮ ಸರ್ಕಾರ ಒಂದು ವರ್ಷದಲ್ಲಿ 1.30 ಲಕ್ಷ ಹಕ್ಕುಪತ್ರಗಳನ್ನು ವಿತರಿಸಿದೆ’ ಎಂದು ಹೇಳಿದರು.

ಈ ಹಿಂದೆಲ್ಲ ಕಾಗದದ ಹಕ್ಕು ಪತ್ರಗಳನ್ನು ಕೊಡುತ್ತಿದ್ದಾಗ ಮೂಲ ದಾಖಲೆಗಳು ಇಲ್ಲದೇ ಸಮಸ್ಯೆ ಆಗುತ್ತಿತ್ತು, ವ್ಯಾಜ್ಯಗಳಿಗೂ ಕಾರಣವಾಗುತ್ತಿತ್ತು. ಡಿಜಿಟಲ್‌ ಹಕ್ಕುಪತ್ರಗಳಿಂದ ಆ ರೀತಿಯ ಸಮಸ್ಯೆಗಳು ನಿವಾರಣೆ ಆಗುತ್ತವೆ. ಡಿಜಿಟಲ್ ಮೂಲ ಕಡತಗಳು ಕಳೆದು ಹೋಗುವ ಅಥವಾ ಸ್ಥಳಾಂತರಿಸುವ ಸಾಧ್ಯತೆ ಇಲ್ಲ. ನಕಲು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ ಎಂದರು.

ಈ ರೀತಿ ಹಕ್ಕು ಪಡೆದವರಿಗೆ ಸರ್ಕಾರದ ವತಿಯಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ನೋಂದಣಿ ಮತ್ತು ಖಾತಾಗಳನ್ನು ಮಾಡಿಸಿಕೊಡುವ ಯೋಜನೆಯೂ ಇದೆ. ರಾಜ್ಯದಲ್ಲಿ ಒಟ್ಟು 3,616 ಈ ರೀತಿಯ ಜನವಸತಿ ಪ್ರದೇಶಗಳಿದ್ದು, ಸುಮಾರು 1.46 ಲಕ್ಷ ಕುಟುಂಬಗಳು ಇರುವ ಅಂದಾಜು ಇದೆ ಎಂದು ತಿಳಿಸಿದರು.

ಆನ್‌ಲೈನ್‌ ಮೂಲಕ ಪೋಡಿ ದುರಸ್ತಿ:

ಪೋಡಿ ದುರಸ್ತಿಯನ್ನು ಆನ್‌ಲೈನ್‌ ಮೂಲಕ ಮಾಡಿಕೊಡಲಾಗುತ್ತಿದೆ. ಪ್ರತಿ ತಿಂಗಳು 5,000 ಪೋಡಿ ದುರಸ್ತಿ ಮಾಡಿಕೊಡುವ ಗುರಿ ನಿಗದಿ ಮಾಡಲಾಗಿದ್ದು, ಇದನ್ನು ಆಂದೋಲನದ ರೂಪದಲ್ಲಿ ಮಾಡಿಕೊಡಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.

‘ಸರಳೀಕೃತ ರೂಪದಲ್ಲಿ ಪೋಡಿ ದುರಸ್ತಿ ಮಾಡಿಕೊಡಲಾಗುವುದು. ಇದರಿಂದ ರೈತರು ಕಚೇರಿಗಳಿಗೆ ವೃಥಾ ಅಲೆಯುವುದು ತಪ್ಪುತ್ತದೆ. ನಾವೇ ಮನೆ ಮನೆಗೆ ಹೋಗಿ 1–5 ದಾಖಲೆಗಳನ್ನು ಸಿದ್ಧಪಡಿಸುತ್ತೇವೆ. ಈ ಪೈಕಿ 30,476 ಪ್ರಕರಣಗಳಲ್ಲಿ ಸರ್ವೆ ಇಲಾಖೆಯಿಂದ ಭೂಮಾಪನ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ’ ಎಂದರು.

ತಹಶೀಲ್ದಾರ್‌ ಕಚೇರಿಗಳಲ್ಲಿನ ‘ಎ’ ಮತ್ತು ‘ಬಿ’ ದರ್ಜೆಯ ಕಡತಗಳನ್ನು ‘ಭೂಸುರಕ್ಷಾ ಯೋಜನೆ’ ಅಡಿ ಗಣಕೀಕರಣಗೊಳಿಸಿ ಇಂಡೆಕ್ಸ್‌ ಕ್ಯಾಟಲಾಗ್‌ ಮಾಡಿ ಸ್ಕ್ಯಾನ್‌ ಮಾಡಲಾಗುತ್ತಿದೆ. ಈವರೆಗೆ 18.28 ಕೋಟಿ ಪುಟಗಳನ್ನು ಸ್ಕ್ಯಾನ್‌ ಮಾಡಲಾಗಿದೆ. ಇನ್ನು ಮುಂದೆ ಆನ್‌ಲೈನ್‌ ಮೂಲಕ ಅರ್ಜಿ ಹಾಕಿ ಪ್ರಮಾಣೀಕೃತ  ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು.

‘ಹೊಸ ಅಕ್ರಮ ಬಡಾವಣೆಗಳ ಜಮೀನು ಮುಟ್ಟುಗೋಲು’

ಹೊಸದಾಗಿ ಯಾರಾದರೂ ಅನಧಿಕೃತ ಬಡಾವಣೆಗಳನ್ನು ನಿರ್ಮಿಸಿದರೆ ಅಂತಹ ಬಡಾವಣೆಗಳ ಜಮೀನನ್ನು ಸರ್ಕಾರ ಮುಟ್ಟಗೋಲು ಹಾಕಿಕೊಳ್ಳಲಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಇನ್ನು ಮುಂದೆ ನೋಂದಣಿ ಮಾಡದೇ ಯಾರೂ ಬಡಾವಣೆ ನಿರ್ಮಿಸುವಂತಿಲ್ಲ. ಅನಧಿಕೃತ ಬಡಾವಣೆಗಳಿಂದ ಸಮಸ್ಯೆಗಳು ಈಗಾಗಲೇ ಸೃಷ್ಟಿ ಆಗಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಅನಧಿಕೃತ ಬಡಾವಣೆಗಳಿಗೆ ಅವಕಾಶ ನೀಡುವುದಿಲ್ಲ. ಸುಪ್ರೀಂ ಕೋರ್ಟ್‌ ಕೂಡ ಇಂತಹ ಬಡಾವಣೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಾಗಿ ಸೂಚಿಸಿದೆ ಎಂದು ಹೇಳಿದರು. ಅನಧಿಕೃತ ಬಡಾವಣೆಗಳು ಕಿಷ್ಕಿಂಧೆ ರೀತಿ ಇರುತ್ತವೆ. ಅಲ್ಲಿ 10 ಅಡಿ ರಸ್ತೆಗಳಿರುತ್ತವೆ. ಇತರ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಆಂಬುಲೆನ್ಸ್‌ ಆಗಲಿ ಅಗ್ನಿ ಶಾಮಕ ವಾಹನಗಳಾಗಲಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.