ADVERTISEMENT

10 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ

ಕಳೆದ ಬಾರಿಗೆ ಹೋಲಿಸಿದರೆ ತಟ್ಟದ ತೀವ್ರತೆ; ಕಾಂಗ್ರೆಸ್‌ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯೂ ತೀವ್ರ ಬರಗಾಲ ಮುಂದುವರಿದರೆ ಚುನಾವಣೆ ಎದುರಿಸುವುದು ಕಷ್ಟ ಎಂಬ ಆತಂಕದಲ್ಲಿದ್ದ ಕಾಂಗ್ರೆಸ್‌ ನಾಯಕರು ನಿಟ್ಟುಸಿರುಬಿಟ್ಟಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿಲ್ಲ.

ರಾಜ್ಯದ 10 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಹೀಗಿದ್ದರೂ ಜನ– ಜಾನುವಾರು ಹಾಹಾಕಾರ ಪಡುವ ಸ್ಥಿತಿ ಇನ್ನೂ ನಿರ್ಮಾಣ ಆಗಿಲ್ಲ. ಆದರೆ, ಮುಂದಿನ ಬೇಸಿಗೆ ದಿನಗಳಲ್ಲಿ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ.

ಹೀಗಾಗಿ, ನೀರು ಸರಬರಾಜಿಗೆ ಹೊಸ ಕೊಳವೆ ಬಾವಿ ಕೊರೆಸಲು, ಪೈಪ್‌ ಲೈನ್‌ ಅಳವಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರತಿ ಜಿಲ್ಲೆಗೆ ತಲಾ ₹ 1 ಕೋಟಿ ಬಿಡುಗಡೆ ಮಾಡಲಿದೆ.

ADVERTISEMENT

ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ (ಪಿ.ಡಿ) ಒಟ್ಟು ₹ 194 ಕೋಟಿ ಹಣ ಲಭ್ಯವಿದೆ. ಕುಡಿಯುವ ನೀರಿನ ಅಗತ್ಯಕ್ಕೆ ಈ ನಿಧಿ ಬಳಸಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ತಕ್ಷಣದ ಅಗತ್ಯಕ್ಕೆ ಬಳಕೆ ಮಾಡಲು ಕನಿಷ್ಠ ₹ 5 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿರಬೇಕು. ಆದರೆ, ಬಳ್ಳಾರಿ, ದಕ್ಷಿಣ ಕನ್ನಡ, ವಿಜಯಪುರ, ಬಾಗಲಕೋಟೆ ಸೇರಿ 5–6 ಜಿಲ್ಲೆಗಳಲ್ಲಿ ಅಷ್ಟು ಹಣ ಇಲ್ಲ. ಆ ಜಿಲ್ಲೆಗಳಿಗೆ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಅರಸೀಕೆರೆ, ಹರಪನಹಳ್ಳಿ, ಕೆ.ಆರ್‌. ಪೇಟೆ, ಕಡೂರು, ಹಳಿಯಾಳ ತಾಲ್ಲೂಕುಗಳ ಗ್ರಾಮಗಳು ಸೇರಿ, ರಾಜ್ಯದ ಒಟ್ಟು 147 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಈ ಪ್ರದೇಶಗಳಿಗೆ  ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ತುರ್ತು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಆದರೆ, 2017ರಲ್ಲಿ ಇದೇ ಅವಧಿಯಲ್ಲಿ 25 ಜಿಲ್ಲೆಗಳಲ್ಲಿ ಜಲಕ್ಷಾಮ ತೀವ್ರವಾಗಿತ್ತು. 1,178 ಹಳ್ಳಿಗಳಲ್ಲಿ ಜನ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ನೀತಿ ಸಂಹಿತೆ ಜಾರಿಯಿಂದ ಶಾಸಕರ ಅಧ್ಯಕ್ಷತೆಯ ಟಾಸ್ಕ್‌ ಫೋರ್ಸ್ (ಕಾರ್ಯಪಡೆ) ಸಮಿತಿ ಅಸ್ತಿತ್ವ ಕಳೆದುಕೊಂಡಿದೆ. ಈ ಸಮಿತಿಯ ಅನುಮೋದನೆ ಪಡೆದು ಕೊರೆದ ಕೊಳವೆ ಬಾವಿಗಳಿಗೆ ಸಂಬಂಧಿಸಿದಂತೆ ಪಾವತಿಗೆ ಬಾಕಿ ಇರುವ ₹147 ಕೋಟಿಯನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ (ಎನ್‌ಆರ್‌ಡಬ್ಯೂಪಿ) ಅಡಿ 2018–19ನೇ ಸಾಲಿಗೆ ಮೀಸಲಿಟ್ಟ ಅನುದಾನದಿಂದ ಬಿಡುಗಡೆ ಮಾಡಲು ಇತ್ತೀಚೆಗೆ ಸೇರಿದ ಸಂಪುಟ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
**
ತೆಂಗು, ಅಡಿಕೆ ಬೆಳೆಹಾನಿಗೆ ನೆರವು ಇಲ್ಲ
ಸತತ ಬರ ಪರಿಸ್ಥಿತಿಯಿಂದ ಹಾನಿಗೊಳಗಾದ ತೆಂಗು ಮತ್ತು ಅಡಿಕೆ ಬೆಳೆಗೆ ₹ 2,492 ಕೋಟಿ ವಿಶೇಷ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಆದರೆ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಥವಾ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಈ ಬೆಳೆಗಳಿಗೆ ಪರಿಹಾರ ನೀಡಲು ಅವಕಾಶ ಇಲ್ಲ ಎಂದು ಕೇಂದ್ರ ಕೃಷಿ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಬೆಳೆ ನಷ್ಟದ ಬಗ್ಗೆ ತೋಟಗಾರಿಕಾ ಇಲಾಖೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಸಂಪುಟ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
**
ಆರು ವರ್ಷಗಳ ಬಳಿಕ ನೀಗಿದ ಬರ
2011ರಿಂದ 2016ರವರೆಗೆ ನಿರಂತರವಾಗಿ ಬರಗಾಲ ಎದುರಿಸಿದ್ದ ರಾಜ್ಯದಲ್ಲಿ, 2017 ಸಾಲಿನ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ.

ಆದ್ದರಿಂದ ಯಾವುದೇ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿರಲಿಲ್ಲ. ಅಲ್ಲದೆ, ಅಂತರ್ಜಲ ಮಟ್ಟದಲ್ಲೂ ಏರಿಕೆ ಉಂಟಾಗಿರುವುದರಿಂದ ಜನ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿಲ್ಲ. ಕಳೆದ 17 ವರ್ಷಗಳಲ್ಲಿ ಮೂರು ವರ್ಷ ಹೊರತುಪಡಿಸಿ (2005, 2007, 2010), ಉಳಿದ ಎಲ್ಲ ವರ್ಷಗಳಲ್ಲಿ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿತ್ತು.
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.