ADVERTISEMENT

ಕೆಪಿಎಸ್‌ಸಿ ಲೋಪ: 10 ಪ್ರಶ್ನೆ ಮುಂದಿಟ್ಟ ಕರವೇ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 16:06 IST
Last Updated 4 ಮಾರ್ಚ್ 2025, 16:06 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ‘ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ನಡೆದ ಮರುಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾದ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಯಾದ ಮಾಹಿತಿ ನೀಡದೆ, ಅವರನ್ನು ದಾರಿತಪ್ಪಿಸಿದ್ದೀರಿ’ ಎಂದು ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಟೀಕಿಸಿದ್ದಾರೆ.

‘384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ ದೊಡ್ಡ ಪ್ರಮಾಣದ ತಪ್ಪುಗಳು ಕಾಣಿಸಿಕೊಂಡು, ಇಡೀ ಪರೀಕ್ಷೆಯೇ ರದ್ದಾಗಲು ಮುಖ್ಯ ಕಾರಣರಾದ ಪರೀಕ್ಷಾ ನಿಯಂತ್ರಕರನ್ನು ತಾವು ಬೆಂಬಲಿಸುತ್ತಿದ್ದೀರಿ. ಪರೀಕ್ಷಾ ನಿಯಂತ್ರಕರು ಅದೇ ಹುದ್ದೆಯಲ್ಲಿ ಮುಂದುವರೆಯಲು ಕೂಡ ತಾವೇ ಕಾರಣ ಎಂಬ ಅಭಿಪ್ರಾಯಗಳು ವಿದ್ಯಾರ್ಥಿಗಳಲ್ಲಿದೆ’ ಎಂದಿರುವ ನಾರಾಯಣಗೌಡ ಅವರು, ಎಕ್ಸ್‌ನಲ್ಲಿ ಅತೀಕ್‌ ಅವರಿಗೆ ಹತ್ತು ಪ್ರಶ್ನೆಗಳನ್ನೂ ಕೇಳಿದ್ದಾರೆ.

‘ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅಧಿಕಾರಿ ಎಂಬುದು ನನಗೆ ಗೊತ್ತಿದೆ. ಹೀಗಾಗಿ ನಿಮ್ಮ ಪ್ರಾಮಾಣಿಕ ಉತ್ತರವನ್ನು ಅಲ್ಲೇ ನಿರೀಕ್ಷಿಸುತ್ತೇನೆ. ಈ ಪ್ರಶ್ನೆಗಳಿಗೆ ಉತ್ತರಿಸಿ.. ಇಲ್ಲವಾದಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ADVERTISEMENT

ಪ್ರಶ್ನೆಗಳೇನು?

*ವಿದ್ವಾಂಸರ ಮುಂದೆ ಪ್ರಶ್ನೆ ಪತ್ರಿಕೆಗಳನ್ನು ಇಡೋಣ. ಸರಿಯೋ ತಪ್ಪೋ ಎಂಬುದನ್ನು ಅವರು ವಿಶ್ಲೇಷಣೆ ಮಾಡಲಿ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ?

* 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಯಾಕೆ ಇಷ್ಟು ಲಘುವಾಗಿ ಪರಿಗಣಿಸುತ್ತಿದ್ದೀರಿ?

* ಎರಡನೇ ಬಾರಿ ಮರುಪರೀಕ್ಷೆಯಲ್ಲೂ ಹಿಂದಿನ ತಪ್ಪು ಯಾಕಾಯಿತು? ಇದಕ್ಕೆ ಯಾರು ಹೊಣೆಗಾರರು? ಕನ್ನಡದ ಕುರಿತು ಯಾಕಿಷ್ಟು ಅವಜ್ಞೆ?

* ಪ್ರಶ್ನೆಪತ್ರಿಕೆಯಲ್ಲಿ 80 ದೋಷಗಳು ಇದ್ದರೆ ಅವುಗಳನ್ನು ಇಂಗ್ಲಿಷ್‌ನಲ್ಲಿ ಓದಿ ಅರ್ಥ ಮಾಡಿಕೊಂಡು ಬರೆಯಲು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಾಧ್ಯವೇ?

* 50ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಉತ್ತರಿಸಲು ಸಾಧ್ಯವೇ ಇಲ್ಲದ ಗಂಭೀರ ಸ್ವರೂಪದ ತಪ್ಪುಗಳಿವೆ. ಇದಕ್ಕೆ 5 ಅಂಕ ಕೊಡುವುದು ಹೇಗೆ ಸರಿಹೋಗುತ್ತದೆ? 

* ಯಾವ ಉದ್ದೇಶಕ್ಕೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲೆ ಹೀಗೆ ಅಮಾನುಷವಾಗಿ ಬರೆ ಎಳೆಯಲಾಗುತ್ತಿದೆ?

* ಮುಖ್ಯಪರೀಕ್ಷೆಗೆ ಅಭ್ಯರ್ಥಿಗಳು ವಿವರಗಳ ಅರ್ಜಿ ನಮೂನೆ (ಡಾಫ್) ಸಲ್ಲಿಸುವ ಮುನ್ನವೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಕೆಪಿಎಸ್‌ಸಿ ಅಧಿಕಾರಿಗಳಿಗೆ ಹೇಗೆ ಗೊತ್ತಾಯಿತು?

* ಮುಖ್ಯಮಂತ್ರಿ ಅವರಿಗೆ ಸರಿಯಾದ ಮಾಹಿತಿ ಒದಗಿಸದೆ, ಕೆಪಿಎಸ್‌ಸಿಯನ್ನು ಸಮರ್ಥಿಸಿಕೊಂಡು, ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ಏಕೆ ಮುಚ್ಚಿಡುತ್ತಿದ್ದೀರಿ?

* ಸರಿಯನ್ನು ಸರಿ, ತಪ್ಪನ್ನು ತಪ್ಪು ಎಂದು ಹೇಳಲಾಗದ ಅನಿವಾರ್ಯ ನಿಮಗೇನು?

* ಸಾರ್ವಜನಿಕವಾಗಿ ಬಹಿರಂಗಗೊಂಡಿರುವ ಪ್ರಶ್ನೆಪತ್ರಿಕೆಯ ಮಹಾಲೋಪವನ್ನು ನೀವು ಮುಖ್ಯಮಂತ್ರಿಯವರ ಗಮನಕ್ಕೆ ಏಕೆ ತರುತ್ತಿಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.