ADVERTISEMENT

100 ಗಡಿ ದಾಟಿದ ಕೆಆರ್‌ಎಸ್‌

ನಾಲೆಗಳಿಗೆ ನೀರು ಹರಿಸುವಂತೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 17:47 IST
Last Updated 17 ಜೂನ್ 2018, 17:47 IST
100 ಗಡಿ ದಾಟಿದ ಕೆಆರ್‌ಎಸ್‌
100 ಗಡಿ ದಾಟಿದ ಕೆಆರ್‌ಎಸ್‌   

ಮಂಡ್ಯ: 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆಆರ್‌ಎಸ್‌ ಜಲಾಶಯ ಜೂನ್‌ ತಿಂಗಳಲ್ಲೇ 100 ಅಡಿಯ ಗಡಿ ದಾಟಿದೆ. ಭಾನುವಾರ ಜಲಾಶಯದ ನೀರಿನ ಮಟ್ಟ 101.40 ಅಡಿಗೆ ತಲುಪಿದೆ.

ಕಳೆದ ಒಂದು ವಾರದಿಂದ ಜಲಾಶಯಕ್ಕೆ 23.55 ಅಡಿ ನೀರು ಹರಿದು ಬಂದಿದೆ. ಏಪ್ರಿಲ್‌ ತಿಂಗಳಲ್ಲಿ ನೀರಿನ ಮಟ್ಟ 73 ಅಡಿಗೆ ಕುಸಿದಿದ್ದ ಕಾರಣ ನಾಲೆಗಳಿಗೆ ಹರಿಯುತ್ತಿದ್ದ ನೀರು ತಪ್ಪಿಸಿ ಕುಡಿಯುವುದಕ್ಕೆ ಮಾತ್ರ ಉಳಿಸಿಕೊಳ್ಳಲಾಗಿತ್ತು. ಆದರೆ, ಕಳೆದ ವಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಹರಿಯುತ್ತಿದ್ದ ಒಳಹರಿವಿನ ಪ್ರಮಾಣ ಹೆಚ್ಚಾಯಿತು. ಭಾನುವಾರ 17,096 ಕ್ಯುಸೆಕ್‌ ಒಳಹರಿವು, 368 ಕ್ಯುಸೆಕ್‌ ಹೊರಹರಿವು ಇತ್ತು. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 67.86 ಅಡಿ ಇತ್ತು. 1,397 ಕ್ಯುಸೆಕ್‌ ಒಳಹರಿವು, 1,074 ಕ್ಯುಸೆಕ್‌ ಹೊರಹರಿವು ದಾಖಲಾಗಿತ್ತು.

‘20 ವರ್ಷಗಳ ಹಿಂದೆ ಜೂನ್‌ ತಿಂಗಳಲ್ಲೇ ಕೆಆರ್‌ಎಸ್‌ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಆ ನಂತರ ಜೂನ್‌ ತಿಂಗಳಲ್ಲಿ ಜಲಾಶಯ 100 ಅಡಿ ದಾಟಿರಲಿಲ್ಲ. ಆಗಸ್ಟ್‌ನಲ್ಲಿ ಭತ್ತ ನಾಟಿ ಕಾರ್ಯ ಆರಂಭಗೊಳ್ಳಲಿದ್ದು, ಜುಲೈ ಮೊದಲ ವಾರದಲ್ಲಿ ಒಟ್ಟಲು ಹಾಕಿಕೊಳ್ಳಬೇಕು. ಕಾವೇರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ನಾಲೆಗಳಿಗೆ ನೀರು ಹರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ಮುಖಂಡ ಹನಿಯಂಬಾಡಿ ನಾಗರಾಜ್‌ ಅವರು ಆಗ್ರಹಿಸಿದರು.

ADVERTISEMENT

ಮುತ್ತತ್ತಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ

ಮಳವಳ್ಳಿ: ಮುತ್ತತ್ತಿಯಲ್ಲಿ ಸ್ನಾನ ಮಾಡಲು ಕಾವೇರಿ ನದಿಗೆ ಇಳಿದಿದ್ದ ರಾಮಯ್ಯ (45) ಶನಿವಾರ ಸಂಜೆ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ಕೊಳ್ಳೆಗಾಲ ತಾಲ್ಲೂಕಿನ ಹನೂರು ಗ್ರಾಮದ ಅವರು, ಹಲವು ವರ್ಷಗಳಿಂದ ಮುತ್ತತ್ತಿಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಸ್ನಾನ ಮಾಡಲು ನದಿಗೆ ಇಳಿದಿದ್ದರು. ಮಳೆಯಿಂದಾಗಿ ನದಿಯಲ್ಲಿ ಒಮ್ಮೆಲೆ ನೀರು ಹೆಚ್ಚಾದ ಕಾರಣ ರಭಸಕ್ಕೆ ಸಿಲುಕಿ ಕೊಚ್ಚಿ ಹೋದರು.

‘ಭಾನುವಾರವಿಡೀ ನುರಿತ ಈಜುಗಾರರು ಹುಡುಕಿದರೂ ಶವ ಸಿಕ್ಕಿಲ್ಲ. ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ. ಸೋಮವಾರ ಮತ್ತೆ ಹುಡುಕುತ್ತೇವೆ’ ಎಂದು ಮುತ್ತತ್ತಿ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಶ್ರೀಧರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.