ADVERTISEMENT

ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವು; ‘ಟಿಟೋಸ್‌’ ಕಂಪನಿಯಿಂದ 100 ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:45 IST
Last Updated 21 ನವೆಂಬರ್ 2018, 19:45 IST
ಮನೆಯ ಮಾದರಿ
ಮನೆಯ ಮಾದರಿ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದ ಸಂತ್ರಸ್ತರಾದವರಿಗೆ ಸೂರು ಕಲ್ಪಿಸಲು ಮಂಗಳೂರಿನ ‘ಟಿಟೋಸ್‌’ ಟೀಶರ್ಟ್‌ ಕಂಪನಿಯ ಮಾಲೀಕ ಸಂದೇಶ್‌ ಮಾರ್ಟಿಸ್‌ ಅವರು ಮುಂದೆ ಬಂದಿದ್ದು, ಬುಧವಾರ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದರು.

ಸಂಸದ ಪ್ರತಾಪ ಸಿಂಹ ಹಾಗೂ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ಅವರೊಂದಿಗೆ ಚರ್ಚಿಸಿದರು. ಕೊಡಗು ಮರು ನಿರ್ಮಾಣಕ್ಕೆ ಕೈಜೋಡಿಸುವುದಾಗಿ ಘೋಷಿಸಿದರು.

100 ಮನೆ ನಿರ್ಮಿಸಿಕೊಡುವ ಉದ್ದೇಶವಿದ್ದು, ಪ್ರತಿ ಮನೆಗೆ ₹ 10ರಿಂದ ₹ 12 ಲಕ್ಷ ವೆಚ್ಚ ಮಾಡಲಾಗುವುದು. ಜಿಲ್ಲಾಡಳಿತ ಜಾಗ ನೀಡಿದ ತಕ್ಷಣ ಕಾಮಗಾರಿ ಆರಂಭಿಸಿ ಜೂನ್‌ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸಂದೇಶ್‌ ಭರವಸೆ ನೀಡಿದರು.

ADVERTISEMENT

ಸಂಸದ ಪ್ರತಾಪ ಸಿಂಹ ಮಾತನಾಡಿ,‘100 ಮನೆ ನಿರ್ಮಾಣಕ್ಕೆ 7 ಎಕರೆಯಷ್ಟು ಜಾಗದ ಅಗತ್ಯವಿದೆ. ಜಿಲ್ಲಾಡಳಿತ ಪುನರ್ವಸತಿಗೆ ಗುರುತಿಸಿರುವ ಜಾಗದಲ್ಲಿಯೇ ಟಿಟೋಸ್‌ ಕಂಪನಿಗೂ ಜಾಗ ನೀಡಲಾಗುವುದು. ಎರಡು ಬೆಡ್‌ ರೂಂನ ಮನೆ, ಆಸ್ಪತ್ರೆ, ಉದ್ಯಾನ ನಿರ್ಮಿಸಲು ಸಂದೇಶ್‌ ಮಾರ್ಟಿಸ್‌ ಅವರು ಸ್ವಇಚ್ಛೆಯಿಂದ ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.

‘ಕೊಡಗು ಮರು ನಿರ್ಮಾಣದ ವಿಚಾರದಲ್ಲಿ ರಾಜ್ಯ ಸರ್ಕಾರದ ಸ್ಪಂದನೆ ಸ್ವಲ್ಪ ವಿಳಂಬವಾಗಿದೆ. ಕೇಂದ್ರ ಸರ್ಕಾರವು ಮೊದಲ ಹಂತದ ಪರಿಹಾರ ಘೋಷಿಸಿದ್ದು, ಜೂನ್‌ ಅಂತ್ಯಕ್ಕೆ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.