ADVERTISEMENT

108 ಆಂಬುಲೆನ್ಸ್: ವೇತನ ಪಾವತಿಗೆ ಗಡುವು

ಜಿವಿಕೆ– ಇಎಂಆರ್‌ಐ ಸಂಸ್ಥೆಗೆ ಸಾಮೂಹಿಕ ರಜೆಯ ಎಚ್ಚರಿಕೆ ನೀಡಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 15:42 IST
Last Updated 6 ಅಕ್ಟೋಬರ್ 2022, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸರ್ಕಾರದ 108-ಆರೋಗ್ಯ ಕವಚ ಯೋಜನೆಯನ್ನು ನಿರ್ವಹಿಸುತ್ತಿರುವಜಿವಿಕೆ–ಇಎಂಆರ್‌ಐ ಸಂಸ್ಥೆಯು ಎರಡು ತಿಂಗಳಿಂದ ವೇತನವನ್ನು ಬಾಕಿ ಉಳಿಸಿಕೊಂಡಿದೆ. ವೇತನ ಬಿಡುಗಡೆಗೆ ಸರ್ಕಾರ ಮಧ್ಯ ಪ್ರವೇಶಿಸದಿದ್ದರೆ ಶುಕ್ರವಾರದಿಂದಲೇ ಸಾಮೂಹಿಕ ರಜೆ ಘೋಷಿಸಲಾಗುವುದು’ ಎಂದು ಸಂಸ್ಥೆಯ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಜಿವಿಕೆ–ಇಎಂಆರ್‌ಐ ಸಂಸ್ಥೆಯಡಿ 2,500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2022–23ನೇ ಸಾಲಿನ ಎರಡನೇ ತ್ರೈಮಾಸಿಕಕ್ಕೆ ಸರ್ಕಾರವು ₹ 25 ಕೋಟಿ ಅನುದಾನವನ್ನು ಸಂಸ್ಥೆಗೆ ಬಿಡುಗಡೆ ಮಾಡಿದೆ. ಇದರಲ್ಲಿ 2022ರ ಸೆಪ್ಟೆಂಬರ್ ವರೆಗಿನ ವೇತನವೂ ಸೇರಿದೆ. ಆದರೂ ಸಂಸ್ಥೆಯು ವೇತನ ಬಿಡುಗಡೆ ಮಾಡದಿರುವುದು ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

‘108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ನೀಡಿಲ್ಲ. ಆದ್ದರಿಂದ ಈ ಬಗ್ಗೆ ಚರ್ಚಿಸಲು ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಅವರನ್ನು ಶುಕ್ರವಾರ ಭೇಟಿ ಮಾಡಲಾಗುವುದು. ವೇತನ ಬಿಡುಗಡೆಯ ಬಗ್ಗೆ ಸೂಕ್ತ ಭರವಸೆ ಸಿಗದಿದ್ದಲ್ಲಿ ಸಾಮೂಹಿಕ ರಜೆಯ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾದರೆ ಸಂಸ್ಥೆಯೇ ಹೊಣೆ’ ಎಂದು 108 ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಎಚ್. ಪರಮಶಿವ ತಿಳಿಸಿದರು.

ADVERTISEMENT

‘ಸಂಸ್ಥೆಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಸರಾ ಹಬ್ಬದ ಸಂಭ್ರಮವೂ ಈ ಬಾರಿ ಇರಲಿಲ್ಲ. ಸರ್ಕಾರವು ಸಂಸ್ಥೆಗೆ ಬಿಡುಗಡೆ ಮಾಡಿರುವ ಹಣ ಏನಾಯಿತು ಎಂಬ ಬಗ್ಗೆ ಸೂಕ್ತ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ಸಿಬ್ಬಂದಿ ಜತೆಗೆ ಸಭೆ

‘ಕಳೆದ 16 ವರ್ಷದಿಂದ ಜಿವಿಕೆ ಸಂಸ್ಥೆ ಆಂಬುಲೆನ್ಸ್‌ ಸೇವೆ ನೀಡುತ್ತಿದೆ. ಒಪ್ಪಂದದ ಪ್ರಕಾರ ಸಂಸ್ಥೆಯೇ ಸಿಬ್ಬಂದಿಗೆ ವೇತನ ನೀಡಬೇಕು. ಸರ್ಕಾರದಿಂದ ಹಣ ಪಾವತಿ ಮಾಡಲಾಗುತ್ತಿದೆ. ಸಂಸ್ಥೆ ಹಾಗೂ ಸಿಬ್ಬಂದಿ ಜತೆಗೆ ಶುಕ್ರವಾರ ಸಭೆ ನಡೆಸಲಾಗುವುದು. ಈ ಸಮಸ್ಯೆಯಿಂದ ಜನರಿಗೆ ತೊಂದರೆಯಾಗಬಾರದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

‘ಆಂಬುಲೆನ್ಸ್ ಟೆಂಡರ್‌ ಅಂತಿಮಗೊಳ್ಳುತ್ತಿದ್ದು, ಎರಡು ತಿಂಗಳೊಳಗೆ ಮುಗಿಯಲಿದೆ. ಬಳಿಕ ಸೇವೆ ನೀಡುವವರು ಯಾರೆಂದು ತೀರ್ಮಾನವಾಗಲಿದೆ.ಬೈಕ್‌ ಆಂಬುಲೆನ್ಸ್‌ ಸೇವೆ ಸಂಬಂಧ ರಚಿಸಿದ ಸಮಿತಿಗಳು ಇದರ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿವೆ. ಆದ್ದರಿಂದ ಹೊಸ ಟೆಂಡರ್‌ನಲ್ಲಿ ಬೈಕ್‌ ಆಂಬುಲೆನ್ಸ್‌ ಪ್ರಸ್ತಾಪ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.