ADVERTISEMENT

11ರೊಳಗೆ ವಸ್ತುಸ್ಥಿತಿ ವರದಿ: ಜೇಕಬ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಮಂಡ್ಯ: ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆಸಿದ ಅಧ್ಯಯನ ವರದಿಯನ್ನು ಅ.11ರೊಳಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಟಿ.ಎಸ್. ಜೇಕಬ್ ತಿಳಿಸಿದರು.

ಮಂಡ್ಯ ಜಿಲ್ಲೆಯ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಳೆಗಳನ್ನು ಶುಕ್ರವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶನಿವಾರವೂ ಅಧ್ಯಯನ ನಡೆಸಲಾಗುವುದು. ಆ ನಂತರ ದೆಹಲಿಗೆ ತೆರಳಿ, ಕಾವೇರಿ ನದಿ ಪ್ರಾಧಿಕಾರಕ್ಕೆ  ಸಮಗ್ರ ವರದಿ ನೀಡಲಾಗುವುದು ಎಂದರು.

`ಕಾವೇರಿ ಅಚ್ಚುಕಟ್ಟು ಪ್ರದೇಶದ ಕೆಲವು ಸ್ಥಳಗಳನ್ನು ಈಗಾಗಲೇ ವೀಕ್ಷಿಸಿದ್ದೇವೆ. ನಾಳೆ ಹೇಮಾವತಿ ಅಚ್ಚುಕಟ್ಟು ಪ್ರದೇಶ ಪರಿಶೀಲಿಸಲಿದ್ದೇವೆ. ಬೆಳೆ, ನೀರಿನ ಲಭ್ಯತೆ, ಮಳೆ ಸೇರಿದಂತೆ ಹಲವಾರು ವಿಷಯಗಳ ಮಾಹಿತಿ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅದರ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗುವುದು~ ಎಂದು ಹೇಳಿದರು.

ಬೆಂಗಳೂರಿನಿಂದ ಕೆಆರ್‌ಎಸ್‌ಗೆ ಬರುವ ಮುನ್ನ ಹೆಲಿಕಾಪ್ಟರ್ ಮೂಲಕ ಜಲಾಶಯ ಹಾಗೂ ಜಿಲ್ಲೆಯ ಬೆಳೆಗಳನ್ನು ಸಮೀಕ್ಷೆ ಮಾಡಿದ್ದೇವೆ. ಇದಕ್ಕೂ ಮೊದಲು ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ, ಮಂಡ್ಯಕೊಪ್ಪಲು, ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರ, ಅಕ್ಕಿಹೆಬ್ಬಾಳು ಮುಂತಾದೆಡೆ ಇಳಿದು ಬೆಳೆ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಕೃಷಿ ಸಚಿವಾಲಯದ ಉಪ ಆಯುಕ್ತ (ಬೆಳೆ) ಡಾ.ಪ್ರದೀಪ್‌ಕುಮಾರ್ ಷಾ ಅವರು ಮಹದೇವಪುರ ಬಳಿ ಬತ್ತದ ಗದ್ದೆ ವೀಕ್ಷಿಸಿದ ನಂತರ ಅಧಿಕಾರಿಗಳಿಗೆ, `ಎಷ್ಟು ಪ್ರದೇಶದಲ್ಲಿ ಬತ್ತ ಬೆಳೆಯಲಾಗಿದೆ, ಎಷ್ಟು ನೀರು ಬೇಕಾಗುತ್ತದೆ, ಯಾವ ಬೆಳೆಗಳನ್ನು ಬೆಳೆಯಲಾಗಿದೆ~ ಎಂದು ಮಾಹಿತಿ ಕೇಳಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ ಹಾಗೂ ತಾಂತ್ರಿಕ ನಿರ್ದೇಶಕ ಶಿವಸ್ವಾಮಿ, ಇಲ್ಲಿ 13,218 ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಲಾಗಿದೆ, ಕಟ್ಟು ಪದ್ಧತಿಯಲ್ಲಿ ನೀರು ಪೂರೈಸಲಾಗುತ್ತಿದೆ, ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ ಹಾಗೂ ಕಬ್ಬು ಬೆಳೆಯಲಾಗಿದೆ ಎಂದು ವಿವರಿಸಿದರು.

ಮಂಡ್ಯಕೊಪ್ಪಲು ಬಳಿಯೂ ಬತ್ತದ ಬೆಳೆ ಹಾಗೂ ಸ್ವಲ್ಪ ಮುಂದೆ ಕಬ್ಬಿನ ಬೆಳೆಯನ್ನು ತಂಡ ವೀಕ್ಷಿಸಿತು. ನಂತರ ಷಾ ಅವರು, ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಬೆಳೆದಿರುವ ಬೆಳೆ, ಬಿದ್ದಿರುವ ಮಳೆ, ಇಳುವರಿ, ಭೇಟಿ ನೀಡಿದ ಸ್ಥಳಗಳ ವಿವರಗಳನ್ನು ನೀಡುವಂತೆ ಸೂಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಂಗಯ್ಯ ಅವರು, ಎಲ್ಲ ಮಾಹಿತಿಗಳನ್ನು ಸಂಜೆ ನೀಡುವುದಾಗಿ ಹೇಳಿದರು. ಜಿಲ್ಲೆಯ ಚಿಕ್ಕಬ್ಯಾಡರಹಳ್ಳಿ, ಪುಟ್ಟಸೋಮನಹಳ್ಳಿ, ಹಾರೋಹಳ್ಳಿ, ಕ್ಯಾತನಹಳ್ಳಿ, ಅರಳಕುಪ್ಪೆ ಮುಂತಾದ ಕಡೆಗಳಲ್ಲಿ ಸಂಚರಿಸಿ ವಾಹನದಲ್ಲಿಯೇ ಬೆಳೆಗಳನ್ನು ವೀಕ್ಷಿಸುತ್ತಾ ಸಾಗಿದರು.

ಕೇಂದ್ರ ಜಲ ಆಯೋಗದ ನಿರ್ದೇಶಕ ಬಿ.ಪಿ.ಪಾಂಡೆ, ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿ ಡಿ.ರಂಗಾರೆಡ್ಡಿ ಅಧ್ಯಯನ ತಂಡದಲ್ಲಿದ್ದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎ. ಸಾದಿಕ್, ಸೂಪರಿಂಟೆಂಡಿಂಗ್ ಎಂಜಿನಿಯರ್ ಶಂಕರೇಗೌಡ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠ ಕೌಶಲೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ ಉಪಸ್ಥಿತರಿದ್ದರು.

ತಡವರಿಸಿದ ಅಧಿಕಾರಿಗಳು: ಭಾಷಾ ಸಮಸ್ಯೆಯಿಂದಾಗಿ ಕೇಂದ್ರ ತಂಡದ ಮುಂದೆ ಪರಿಸ್ಥಿತಿಯನ್ನು ವಿವರಿಸಲು ಅಧಿಕಾರಿಗಳು ತಡವರಿಸಿದರು. ಕೇಂದ್ರ ತಂಡದ ಸದಸ್ಯರು, ಇಂಗ್ಲಿಷ್‌ನಲ್ಲಿ ಎಲ್ಲ ಮಾಹಿತಿಯನ್ನು ಕೇಳುತ್ತಿದ್ದರು.

ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸುಲಲಿತವಾಗಿ ವಿವರಿಸಲು ಸಾಧ್ಯವಾಗಲಿಲ್ಲ. ಎಲ್ಲ ಮಾಹಿತಿಯನ್ನು ಸಂಜೆ ನೀಡುವುದಾಗಿ ಹೇಳಿ ನಿಭಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.