ADVERTISEMENT

11 ವರ್ಷದ ಬಾಲಕನನ್ನು ಜೀತಕ್ಕೆ ತಳ್ಳಿದ ಶಿಕ್ಷಕ!

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST
11 ವರ್ಷದ ಬಾಲಕನನ್ನು ಜೀತಕ್ಕೆ ತಳ್ಳಿದ ಶಿಕ್ಷಕ!
11 ವರ್ಷದ ಬಾಲಕನನ್ನು ಜೀತಕ್ಕೆ ತಳ್ಳಿದ ಶಿಕ್ಷಕ!   

ಮೈಸೂರು: ಶಿಕ್ಷಕನೊಬ್ಬ ಹನ್ನೊಂದು ವರ್ಷದ ಬಾಲಕನನ್ನು ಜೀತಕ್ಕೆ ಇಟ್ಟುಕೊಂಡಿರುವುದನ್ನು ಒಡನಾಡಿ ಸಂಸ್ಥೆ ಪತ್ತೆ ಮಾಡಿದ್ದು, ದಾಸ್ಯದಲ್ಲಿದ್ದ ಬಾಲಕನನ್ನು ಸೋಮವಾರ ರಾತ್ರಿ ಬಿಡುಗಡೆಗೊಳಿಸಲಾಗಿದೆ.

ತುಮಕೂರು ಜಿಲ್ಲೆಯ ತುರುವೇಕೆರೆ ಬಳಿಯ ಕಡೇಹಳ್ಳಿಯ ಚಂದ್ರೇಗೌಡ-ಭಾಗ್ಯಮ್ಮ ದಂಪತಿ ಪುತ್ರ ಗಿರೀಶ್ (11) ಮುಕ್ತಿ ಪಡೆದವ. ಮೈಸೂರು ತಾಲ್ಲೂಕು ಕರಕನಹಳ್ಳಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ್ ಬಾಲಕನ್ನು ದಾಸ್ಯಕ್ಕೆ ಇಟ್ಟುಕೊಂಡಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ದೂರು ದಾಖಲಾಗಿದ್ದು ಶುಕ್ರವಾರ ವಿಚಾರಣೆಗೆ ಹಾಜರಾಗವಂತೆ ಶಿಕ್ಷಕ ಸುರೇಶ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.  

ಗಿರೀಶ್ ಚಿಕ್ಕವನಿದ್ದಾಗಲೇ ತಾಯಿ ಭಾಗ್ಯ ಮೃತಪಟ್ಟಿದ್ದರು. 5ನೇ ತರಗತಿ ಓದುತ್ತಿದ್ದ ಬಾಲಕನನ್ನು ವರ್ಷದ ಹಿಂದೆ ತಂದೆ ಚಂದ್ರೇಗೌಡ ಮೈಸೂರಿನ ಒಂಟಿಕೊಪ್ಪಲಿನಲ್ಲಿನ ದೂರದ ಸಂಬಂಧಿ ರಮೇಶ್ ಮನೆಯಲ್ಲಿ ಓದಲು ಬಿಟ್ಟಿದ್ದರು. ಕೆಲ ದಿನಗಳ ಹಿಂದೆ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.
ಬಾಲಕ ನಾಪತ್ತೆಯಾಗಿರುವುದಾಗಿ ರಮೇಶ್ ಒಂಟಿಕೊಪ್ಪಲಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

`ಒಂಟಿಕೊಪ್ಪಲಿನಿಂದ ತಪ್ಪಿಸಿಕೊಂಡು ಇಲವಾಲಕ್ಕೆ ಹೋದೆ. ಅಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರ ಮನೆಯಲ್ಲಿ ಒಂದು ವಾರ ಇದ್ದೆ. ಅಲ್ಲಿಂದ ಕರಕನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋದೆ. ಅಲ್ಲಿ ಶಿಕ್ಷಕ ಸುರೇಶ್ ತನ್ನನ್ನು ಅವರ ಊರು ಸಾಗರಕಟ್ಟೆ ಬಳಿಯ ರಾಮನಹಳ್ಳಿಗೆ ಕರೆತಂದು ಅವರ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡರು~ ಎನ್ನುತ್ತಾನೆ ಗಿರೀಶ್.

ಅಲ್ಲಿ ಜಮೀನು ಉಳುಮೆ ಮಾಡುವುದು, ಟಗರು ಕಾಯವುದು, ಹಸು-ಎಮ್ಮೆಗಳಿಗೆ ಸ್ನಾನ ಮಾಡಿಸುವ ಕಾಯಕ ಮಾಡುತ್ತಿದ್ದಾಗಿ ಬಾಲಕ ತಿಳಿಸಿದ್ದಾನೆ.

ಶಿಕ್ಷಕ ವೃತ್ತಿಗೆ ಬರುವ ಮೊದಲು ಸುರೇಶ್ ಪೊಲೀಸ್ ಇಲಾಖೆಯಲ್ಲಿ ಇದ್ದರಂತೆ. ಈಗ ಮೈಸೂರಿನಲ್ಲಿ ವಾಸವಾಗಿದ್ದು, ಆತನ ತಂದೆ ತಾಯಿ ಊರಿನಲ್ಲಿ ಜಮೀನು ಕೆಲಸ ಮಾಡಿಸಿಕೊಂಡು ಇದ್ದಾರೆ. ಜಮೀನಿನಲ್ಲಿ ದುಡಿಯುತ್ತಿದ್ದ ಹುಡುಗನನ್ನು ಊರಿಗೆ ಕಳುಹಿಸುವಂತೆ ಗ್ರಾಮಸ್ಥರು ಹಲವು ಬಾರಿ ಈ ಮೇಷ್ಟ್ರಿಗೆ ಹೇಳಿದ್ದರು. ಕೊನೆಗೆ ಊರಿನ ಕೆಲವರು ಒಡನಾಡಿ ಸಂಸ್ಥೆಗೆ ಫೋನ್ ಮಾಡಿ ವಿಷಯ ತಿಳಿಸಿದರು.  

ಗಿರೀಶ ಮುಂದಕ್ಕೆ ಓದುವ ಇಂಗಿತ ವ್ಯಕ್ತಪಡಿಸಿದ್ದಾನೆ. ಸದ್ಯಕ್ಕೆ ಈತನನ್ನು ಜೆ.ಪಿ.ನಗರದಲ್ಲಿನ ಬಾಲ ಮಂದಿರದಲ್ಲಿ ಬಿಡಲಾಗಿದೆ. ಸೂಕ್ತ ದಾಖಲೆಗಳನ್ನು ಒದಗಿಸಿದರೆ ಪೋಷಕರು ಹುಡುಗನನ್ನು ಕರೆದುಕೊಂಡು ಹೋಗಬಹುದು, ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಒಪ್ಪಿಸಲಾಗುವುದು ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.