ADVERTISEMENT

12 ವರ್ಷಗಳ ನಂತರ ಪೋಷಕರ ಸೇರಿದ ಪುತ್ರ

2005ರಲ್ಲಿ 18 ವರ್ಷದವನಿದ್ದಾಗ ನಾಪತ್ತೆಯಾದ ಮಗ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 20:10 IST
Last Updated 6 ಜೂನ್ 2017, 20:10 IST
ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಮಂಗಳವಾರ ತಾಯಿ ಸಿಂಗಮ್ಮ, ಸಹೋದರ ಶಿವಲಿಂಗೇಗೌಡ ಅವರನ್ನು ಸೇರಿಕೊಂಡ ದೇವು.
ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಮಂಗಳವಾರ ತಾಯಿ ಸಿಂಗಮ್ಮ, ಸಹೋದರ ಶಿವಲಿಂಗೇಗೌಡ ಅವರನ್ನು ಸೇರಿಕೊಂಡ ದೇವು.   

ಶಿವಮೊಗ್ಗ: ಕಾಣೆಯಾಗಿದ್ದ ಅರೆ ಬುದ್ಧಿಮಾಂದ್ಯ ಯುವಕ 12 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ಕ್ಷಣಕ್ಕೆ ಇಲ್ಲಿನ ದೊಡ್ಡಪೇಟೆ ಠಾಣೆ ಮಂಗಳವಾರ ಸಾಕ್ಷಿಯಾಯಿತು.

ನೆಲಮಂಗಲ ಸಮೀಪದ ಕಗ್ಗಲಿಪುರ ಜವರಯ್ಯ (ದೇವು) ಎಂಬುವರು ತಾಯಿ ಸಿಂಗಮ್ಮ, ಸಹೋದರ ಶಿವಲಿಂಗೇಗೌಡ ಅವರನ್ನು ಮರಳಿ ಸೇರಿಕೊಂಡಿದ್ದಾರೆ.

ತಂದೆ ಶಿವಣ್ಣ 2005ರಲ್ಲಿ ಕೂಲಿ ಕೆಲಸಕ್ಕೆ 18 ವರ್ಷದ ಮಗ ಜವರಯ್ಯನನ್ನು ಗ್ರಾಮಕ್ಕೆ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಬರುವಾಗ ದಾರಿಯಲ್ಲಿ ನಾಪತ್ತೆಯಾಗಿದ್ದ. ಎಲ್ಲ ಕಡೆ ಹುಡುಕಿದ ನಂತರ ನೆಲಮಂಗಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ADVERTISEMENT

ಕಾಣೆಯಾಗಿದ್ದ ಜವರಯ್ಯ ಶಿವಮೊಗ್ಗಕ್ಕೆ ಬಂದು ಅಲ್ಲೇ ನೆಲೆಸಿದ್ದರು. ನಡುವೆ ಅಪಘಾತದಲ್ಲಿ ಗಾಯಗೊಂಡು ಮೆಗ್ಗಾನ್‌ ಆಸ್ಪತ್ರೆ ಸೇರಿದ್ದರು. ಅಲ್ಲಿನ ಶುಶ್ರೂಷಕಿಯರು, ಸಿಬ್ಬಂದಿ ಅವರಿಗೆ ಅಲ್ಲೇ ಆಶ್ರಯ ನೀಡಿ ದೇವು ಎಂದು ಹೆಸರು ಇಟ್ಟಿದ್ದರು. ದೇವು ಅಲ್ಲೇ ಅಡುಗೆ ಸಹಾಯಕನಾಗಿ ಅವರು ಕೆಲಸ ಮಾಡುತ್ತಿದ್ದರು.

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಈಚೆಗೆ ಅಮೀರ್‌ ಸಾಬ್‌ ಅವರನ್ನು ಅವರ ಪತ್ನಿ ನೆಲದ ಮೇಲೆ ಎಳೆದುಕೊಂಡು ಹೋಗಿದ್ದ ಪ್ರಕರಣ ಬಿತ್ತರವಾದಾಗ ದೇವು ದೃಶ್ಯ ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ  ಮುಖದ ಚಹರೆ ಗುರುತಿಸಿದ ಪೋಷಕರು ಸೀದಾ ಶಿವಮೊಗ್ಗಕ್ಕೆ ಬಂದು ಮಗನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ದೇವು ಪೋಷಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಕಳಿಯಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.