ADVERTISEMENT

ಕೊಡಗು: ಟಾಟಾ ಸಂಸ್ಥೆಯ ಸ್ವಾಧೀನದಲ್ಲಿದ್ದ 1,300 ಎಕರೆ ವಶಕ್ಕೆ ಪಡೆಯಲು ಆದೇಶ

ವಿರಾಜಪೇಟೆ ಸಿವಿಲ್ ನ್ಯಾಯಾಲಯವು ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 11:36 IST
Last Updated 6 ಡಿಸೆಂಬರ್ 2021, 11:36 IST

ವಿರಾಜಪೇಟೆ (ಕೊಡಗು): ಟಾಟಾ ಸಂಸ್ಥೆಯ ಸ್ವಾಧೀನದಲ್ಲಿದ್ದ 1,300 ಎಕರೆ ಟೀ ತೋಟವನ್ನು ಸರ್ಕಾರದ ವಶಕ್ಕೆ ನೀಡುವಂತೆ ವಿರಾಜಪೇಟೆ ಸಿವಿಲ್ ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.

ಜಿಲ್ಲೆಯ ಟಿ.ಶೆಟ್ಟಿಗೇರಿ, ಹುದಿಕೇರಿ ಹಾಗೂ ಬಿರುನಾಣಿ ಗ್ರಾಮದ ವ್ಯಾಪ್ತಿಯಲ್ಲಿ ಟೀ ತೋಟವು ಪ್ರಸ್ತುತ ಟಾಟಾ ಸಂಸ್ಥೆಯ ಸ್ವಾಧೀನದಲ್ಲಿತ್ತು.

ಬ್ರಿಟಿಷ್ ಸರ್ಕಾರವು 1914-15ರಲ್ಲಿ ಈ ಗ್ರಾಮದ ವ್ಯಾಪ್ತಿಯಲ್ಲಿ ಟೀ ಸಾಗುವಳಿಗಾಗಿ ಮೆಕ್ ಡೋಗಲ್ ಗ್ಲೆನ್ ಲೋರ್ನಾ ಸಂಸ್ಥೆಗೆ 999 ವರ್ಷಗಳಿಗೆ ಗುತ್ತಿಗೆಗೆ ನೀಡಿತ್ತು. ನಂತರದ ವರ್ಷಗಳಲ್ಲಿ ಈ ಅವಧಿಯನ್ನು 99 ವರ್ಷಕ್ಕೆ ಸೀಮಿತಗೊಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಬಾಡಿಗೆ ನಿಗದಿ ಪಡಿಸಲಾಗಿತ್ತು. 1928ರಲ್ಲಿ ಗ್ಲೆನ್ ಲೋರ್ನಾ ಸಂಸ್ಥೆಯು ಅನಾರ್ಕಲ್ ಟೀ ಕಂಪನಿಗೆ, ನಂತರ 1985ರಲ್ಲಿ ಈಗಿನ ಟಾಟಾ ಕಾಫಿ ಸಂಸ್ಥೆಯಾದ ಆಗಿನ ಕನ್ಸಾಲಿಡೇಟೆಡ್ ಸಂಸ್ಥೆಗೆ ಹಸ್ತಾಂತರಿಸಿತ್ತು.

ಈ ಜಾಗದ ಆರ್.ಟಿ.ಸಿಯಲ್ಲಿದ್ದ ‘ಪೈಸಾರಿ’ ಎಂಬ ನಿಬಂಧನೆಯನ್ನು ಆದೇಶವಿಲ್ಲದೆ ಕಾನೂನು ಬಾಹಿರವಾಗಿ ‘ಸಾಗುವಳಿ’ ಎಂದು ಬದಲಾಯಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. 1914ರಲ್ಲಿ ಜಾಗವನ್ನು ಗುತ್ತಿಗೆ ಕೊಡುವಾಗ ಇದ್ದಂತೆಯೇ ಸರಿಪಡಿಸಿ, ಸರ್ಕಾರದ ವಶಕ್ಕೆ ಜಮೀನು ನೀಡುವಂತೆ ಸರ್ಕಾರವು ಹೇಳಿತ್ತು. ಜತೆಗೆ, 99 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರಿಂದ ಜಾಗವನ್ನು ಮೀಸಲು ಅರಣ್ಯ ಎಂದು ಪರಿಗಣಿಸಲು ಅರಣ್ಯ ಇಲಾಖೆಯು ಪ್ರಕ್ರಿಯೆ ಆರಂಭಿಸಿತ್ತು. ಟಾಟಾ ಕಂಪನಿಗೆ ನೋಟಿಸ್ ಸಹ ನೀಡಲಾಗಿತ್ತು.

ಆದರೆ, ಟಾಟಾ ಹಾಗೂ ಗ್ಲೆನ್ ಲೋರ್ನಾ ಪ್ಲಾಂಟೇಷನ್ ಸಂಸ್ಥೆಯು ಈ ಪ್ರಕ್ರಿಯೆ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ ಪ್ರಕರಣವನ್ನು ವಿರಾಜಪೇಟೆಯ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಜಿ.ಲೋಕೇಶ್ ಅವರು, ಸಂಸ್ಥೆಯ ಅರ್ಜಿ ವಜಾಗೊಳಿಸಿದ್ದಾರೆ. ಸರ್ಕಾರದ ವಶಕ್ಕೆ ಜಮೀನು ಪಡೆಯುವಂತೆ ಆದೇಶಿಸಿದ್ದು, ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಕೀಲೆ ಕಂಜಿತಂಡ ಅನಿತಾ ದೇವಯ್ಯ ವಾದ ಮಂಡಿಸಿದ್ದರು.

‘ನ್ಯಾಯಾಲಯದ ಆದೇಶದ ಪ್ರತಿ ದೊರೆತ ಕೂಡಲೇ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ಯೋಗಾನಂದ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT