ADVERTISEMENT

ಕೇಂದ್ರ,ರಾಜ್ಯದಲ್ಲಿ ಆಹಾರ ದಾಸ್ತಾನು ಇದೆ,146 ಲೈಸೆನ್ಸ್ ಅಮಾನತು: ಸಚಿವ ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 11:18 IST
Last Updated 29 ಏಪ್ರಿಲ್ 2020, 11:18 IST
ಸಚಿವ ಗೋಪಾಲಯ್ಯ
ಸಚಿವ ಗೋಪಾಲಯ್ಯ   

ಹಾವೇರಿ: ‘ಏಪ್ರಿಲ್‌ ತಿಂಗಳಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮವೆಸಗಿದ ವಿವಿಧ ಜಿಲ್ಲೆಗಳ 146 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಿದ್ದು, ₹ 4 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದಅವರು, ಹಾವೇರಿ ಜಿಲ್ಲೆಯಲ್ಲೂ 9 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್‌ ನೀಡಿದ್ದು, ಹಾನಗಲ್‌ ತಾಲ್ಲೂಕಿನ ಒಂದು ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ದರ ಪಟ್ಟಿ ಪ್ರಕಟಿಸಬೇಕು. ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗಬಾರದು ಮತ್ತು ಗ್ರಾಹಕರಿಂದ ಸೇವಾ ತೆರಿಗೆ ತೆಗೆದುಕೊಳ್ಳುವಂತಿಲ್ಲ. ಈ ಬಗ್ಗೆ ದೂರುಗಳು ಬಂದರೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಪ್ರತಿ ನ್ಯಾಯಬೆಲೆ ಅಂಗಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ಆಹಾರ ಕೊರತೆಯಿಲ್ಲ:ಕೇಂದ್ರ ಸರ್ಕಾರದ ಬಳಿ ವರ್ಷಕ್ಕೆ ಆಗುವಷ್ಟು ಆಹಾರ ದಾಸ್ತಾನು ಇದೆ. ಅದೇ ರೀತಿ ರಾಜ್ಯದಲ್ಲೂ ಕೊರತೆ ಇಲ್ಲ. 8 ಲಕ್ಷ ಪಡಿತರ ಚೀಟಿದಾರರಿಗೆ ಸಂಬಂಧಪಟ್ಟ ಒಟ್ಟು 27 ಲಕ್ಷ ಮಂದಿಗೆ ಪಡಿತರ ನೀಡುತ್ತಿದ್ದೇವೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 31.5 ಲಕ್ಷ ಜನರಿಗೆ ಕೇಂದ್ರ ಸರ್ಕಾರ 3 ತಿಂಗಳು ಉಚಿತವಾಗಿ ಅಡುಗೆ ಅನಿಲ ವಿತರಿಸಲು ಕ್ರಮ ಕೈಗೊಂಡಿದೆ. ಈಗಾಗಲೇ ಏಪ್ರಿಲ್‌ ತಿಂಗಳ ಹಣ ಎಲ್ಲ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ ಎಂದರು.

1 ಲಕ್ಷ ಕುಟುಂಬಗಳಿಗೆ ಉಚಿತ ಅನಿಲ:ರಾಜ್ಯ ಸರ್ಕಾರ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ರಾಜ್ಯದ 1 ಲಕ್ಷ ಕುಟುಂಬಗಳಿಗೆ ₹ 27 ಕೋಟಿ ವೆಚ್ಚದಲ್ಲಿ 3 ತಿಂಗಳು ಉಚಿತವಾಗಿ ಅಡುಗೆ ಅನಿಲ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರ ಭತ್ತ, ರಾಗಿ, ಜೋಳ ಖರೀದಿಸಲು ಅನುಮೋದನೆ ನೀಡಿದ್ದು, ಮಕ್ಕೆಜೋಳ ಖರೀದಿಸಲು ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.