ಬೆಂಗಳೂರು: ಕೇಂದ್ರದ 15ನೇ ಹಣಕಾಸು ಆಯೋಗದ ಅನುದಾನದ ಮೊದಲ ಕಂತು ಬಿಡುಗಡೆಯಾಗಿ ತಿಂಗಳು ಕಳೆದರೂ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಒಂದು ರೂಪಾಯಿಯನ್ನೂ ವಿನಿಯೋಗಿಸಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯಿತಿಗಳು ಅನುದಾನ ಸೆಳೆಯದಂತೆ ತಂತ್ರಾಂಶದಲ್ಲೇ ಲಾಕ್ ಮಾಡಿರುವುದರಿಂದ ₹448.29 ಕೋಟಿ ಹಾಗೆಯೇ ಉಳಿದಿದೆ.
ಈ ವರ್ಷ ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಆಯೋಗದಿಂದ ಅನುದಾನದ ರೂಪದಲ್ಲಿ ₹2,637 ಕೋಟಿ ಬರಬೇಕಿದೆ. ಆದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಾಖಲೆ ಸಲ್ಲಿಸಲು ವಿಳಂಬ ಮಾಡಿದ್ದರಿಂದ ಮೊದಲ ಕಂತು ಮಾತ್ರ ಬಿಡುಗಡೆ ಆಗಿದೆ. ಆದರೆ, ಇ– ಗ್ರಾಮ ಸ್ವರಾಜ್ ತಂತ್ರಾಂಶದಲ್ಲಿ ‘ಆಟೊ ರಿಸಿಪ್ಟ್’ ಚಾಲನೆ ಮಾಡದೇ ಇರುವುದರಿಂದ ಮೊದಲ ಕಂತಿನ ಅನುದಾನವು ಇಲಾಖೆಯ ಬಳಿಯಲ್ಲೇ ಉಳಿಯುವಂತಾಗಿದೆ.
‘ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದ ಮೊದಲ ಕಂತಿನ ಅನುದಾನವನ್ನು 5,950 ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿ ಇಲಾಖೆಯು ನವೆಂಬರ್ 26ರಂದು ಆದೇಶ ಹೊರಡಿಸಿತ್ತು. ಆದರೆ, ಇ–ಗ್ರಾಮ ಸ್ವರಾಜ್ ತಂತ್ರಾಂಶದಲ್ಲಿ ‘ಆಟೊ ರಿಸಿಪ್ಟ್’ ಮೂಲಕ ವೋಚರ್ ಸೃಜಿಸಲು ಅನುಮತಿ ನೀಡಿಲ್ಲ. ಇದರಿಂದಾಗಿ ಅನುದಾನ ಬಳಕೆಗೆ ಅವಕಾಶ ಸಿಕ್ಕಿಲ್ಲ’ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಸ್ವಂತ ವರಮಾನವಿಲ್ಲದ ಗ್ರಾಮ ಪಂಚಾಯಿತಿಗಳಿಗೆ ಪ್ರಸಕ್ತ ಆರ್ಥಿಕ ವರ್ಷದ ಮೂರು ತ್ರೈಮಾಸಿಕಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಯೋಗದಿಂದ ಮೊದಲ ಕಂತು ಬಿಡುಗಡೆ ಆಗುತ್ತಿದ್ದಂತೆಯೇ ಬಹುತೇಕ ಗ್ರಾಮ ಪಂಚಾಯಿತಿಗಳು ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡಿದ್ದವು. ಅನುದಾನ ಸೆಳೆಯಲು ಅವಕಾಶ ದೊರಕದೇ ಇರುವುದರಿಂದ ಕ್ರಿಯಾಯೋಜನೆಗಳು ಕಡತದಲ್ಲೇ ಉಳಿದಿವೆ.
ಇನ್ನೂ ಮೂರು ಕಂತು ಬಾಕಿ: ಕೇಂದ್ರ ಹಣಕಾಸು ಆಯೋಗವು ನಾಲ್ಕು ಕಂತುಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುತ್ತದೆ. ದೇಶದ ಕೆಲವು ರಾಜ್ಯಗಳು ಈ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಂಡಿವೆ. ಹಲವು ರಾಜ್ಯಗಳು ಎರಡು ಮತ್ತು ಮೂರನೇ ಕಂತಿನ ಅನುದಾನ ಪಡೆದಿವೆ. ಆದರೆ, ರಾಜ್ಯಕ್ಕೆ ಇನ್ನೂ ಮೂರು ಕಂತುಗಳ ಅನುದಾನ ಬಿಡುಗಡೆ ಬಾಕಿ ಇದೆ.
ಪಂಚತಂತ್ರ 2.0 ತಂತ್ರಾಂಶದ ಮೂಲಕ ಕೇಂದ್ರ ಸರ್ಕಾರದ ಇ– ಗ್ರಾಮ ಸ್ವರಾಜ್ ಪೋರ್ಟಲ್‌ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಅಪ್‌ಲೋಡ್ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಯತ್ನಿಸಿತ್ತು. ಆದರೆ, ಅರ್ಧ ವರ್ಷ ಕಳೆದರೂ ಪ್ರಯತ್ನ ಫಲ ಕೊಡದ ಕಾರಣ ಹಿಂದಿನಂತೆ ನೇರವಾಗಿ ಇ–ಗ್ರಾಮ ಸ್ವರಾಜ್ ಪೋರ್ಟಲ್‌ಗೆ ನೇರವಾಗಿ ಜಿಪಿಡಿಪಿ ಅಪ್‌ಲೋಡ್ ಮಾಡಲಾಗಿದೆ. ಆ ಬಳಿಕ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಿತ್ತು.
ಈಗ ಆಗಿರುವ ಲೋಪಕ್ಕೆ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ. ತಕ್ಷಣ ಅನುದಾನದ ಬಳಕೆಗೆ ಅನುಮತಿ ನೀಡಬೇಕು. ಬಾಕಿ ಇರುವ ಕಂತುಗಳ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕುಕಾಡಶೆಟ್ಟಿಹಳ್ಳಿ ಸತೀಶ್ ಅಧ್ಯಕ್ಷರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ
‘ದತ್ತಾಂಶ ತಾಳೆಯಾಗದೆ ವಿಳಂಬ’
‘ಗ್ರಾಮ ಪಂಚಾಯಿತಿಗಳ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದತ್ತಾಂಶ ತಾಳೆಯಾಗದೇ ಇರುವುದರಿಂದ ಆಯೋಗದ ಅನುದಾನದ ಬಳಕೆಗೆ ತೊಡಕಾಗಿದೆ. ‘ಪ್ರಜಾವಾಣಿ’ಯು ಈ ವಿಷಯವನ್ನು ಗಮನಕ್ಕೆ ತಂದ ಬಳಿಕ ಪರಿಶೀಲನೆ ನಡೆಸಿದ್ದು ಸಮಸ್ಯೆ ಆಗಿರುವುದು ಕಂಡುಬಂದಿದೆ’ ಎಂದು ಪಂಚಾಯತ್ ರಾಜ್ ಇಲಾಖೆಯ ಇ–ಆಡಳಿತ ವಿಭಾಗದ ನಿರ್ದೇಶಕಿ ನಂದಿನಿ ದೇವಿ ಅವರು ಪ್ರತಿಕ್ರಿಯಿಸಿದರು. ‘ಖಜಾನೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.