ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಭತ್ತ ಹಾಗೂ ಕಬ್ಬು ಬೆಳೆದಿರುವ ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ 13 ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.
2000ನೇ ಇಸವಿಯಿಂದ 2016ರ ವರೆಗಿನ 16 ವರ್ಷಗಳಲ್ಲಿ ಸೆ. 4ರ ನೀರಿನಮಟ್ಟ ತೆಗೆದುಕೊಂಡಾಗ ಇಷ್ಟೊಂದು ಕಡಿಮೆ ಪ್ರಮಾಣಕ್ಕೆ (87.75 ಅಡಿ) ಯಾವ ವರ್ಷವೂ ಕುಸಿದಿರಲಿಲ್ಲ. ಅಣೆಕಟ್ಟೆಯಲ್ಲಿ 14.61 ಟಿಎಂಸಿ ಅಡಿ ನೀರಿದ್ದು, ಬಳಕೆಗೆ ಬರುವಂತಹದ್ದು ಕೇವಲ 6.26 ಟಿಎಂಸಿ ಅಡಿಗಳಷ್ಟು ಮಾತ್ರ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ 2003ನೇ ಇಸ್ವಿಯಲ್ಲಿ ಸಮಸ್ಯೆ ಎದುರಾದಾಗ 91.93 ಅಡಿ ಇತ್ತು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ ಸಮಸ್ಯೆ ಎದುರಾದಾಗಲೂ ನೀರಿನಮಟ್ಟವು 110.60 ಅಡಿ ಇತ್ತು.
ಕಳೆದ ಎಂಟು ದಿನಗಳಿಂದ ಅಣೆಕಟ್ಟೆಯಿಂದ 13ರಿಂದ 16 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಗೆ ಹರಿದು ಬರುವ ನೀರಿನ ಪ್ರಮಾಣ 8.500 ಕ್ಯುಸೆಕ್‌ನಷ್ಟಿದೆ. ಈ ಅವಧಿಯಲ್ಲಿ ಆರಂಭದಲ್ಲಿ 99.60 ಅಡಿಯಷ್ಟಿದ್ದ ನೀರಿನ ಪ್ರಮಾಣವು ಬುಧವಾರ 87.75 ಅಡಿಗೆ ಕುಸಿದಿದೆ. ಸೆ. 20ರ ವರೆಗೆ ನೀರು ಹರಿಸುವುದರಿಂದ ಅಣೆಕಟ್ಟೆಯಲ್ಲಿ ನೀರಾವರಿಗೆ ಮೂರರಿಂದ ನಾಲ್ಕು ಟಿಎಂಸಿ ಅಡಿಯಷ್ಟು ಮಾತ್ರ ನೀರು ಉಳಿಯಬಹುದು ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.
ತಮಿಳುನಾಡಿಗೆ ನೀರು ಬಿಡಲು ಆರಂಭಿಸಿದ ಎಂಟು ದಿನಗಳಲ್ಲಿ ಅಣೆಕಟ್ಟೆಯ ನೀರಿನಮಟ್ಟ 12 ಅಡಿಯಷ್ಟು ಕುಸಿದಿದೆ. ಸೆ. 20ರ ವೇಳೆಗೆ ನೀರಿನ ಕನಿಷ್ಠ ಮಟ್ಟ 74 ಅಡಿಯ ಆಸು–ಪಾಸಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
ತ್ರಿಶಂಕು ಸ್ಥಿತಿಯಲ್ಲಿ ರೈತರು: ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ಸಲಹಾ ಸಮಿತಿ ತಿಳಿಸಿದ ಮೇಲೆ ಕೃಷಿ ಇಲಾಖೆಯಿಂದ ಭತ್ತದ ಬೀಜ ತೆಗೆದುಕೊಂಡು ನಾಟಿ ಮಾವಡಿದ ರೈತರು ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ನಾಲೆಯ ನೀರು ಆಶ್ರಯಿಸಿ 1 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಹಾಗೂ 35 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕೆಲವರ ಭತ್ತಕ್ಕೆ ಈಗಾಗಲೇ ಒಂದು ತಿಂಗಳಾಗಿದ್ದರೆ, ಇನ್ನು ಕೆಲವರು ಈಗಷ್ಟೇ ನಾಟಿ ಮಾಡುತ್ತಿದ್ದಾರೆ. ಡಿಸೆಂಬರ್ ಅಂತ್ಯದವರೆಗೂ ನೀರು ಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.