ADVERTISEMENT

1657 ಗುತ್ತಿಗೆ ನೌಕರರ ಸೇವೆ ಕಾಯಂ ರದ್ದು

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯ 1,657 `ಸಿ' ವೃಂದದ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಲು ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದರು.

ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಎನ್.ಚೆಲುವರಾಯಸ್ವಾಮಿ ಅವರು ವಿಷಯ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, `ಉಮಾದೇವಿ ಮತ್ತು ಇತರರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ನೌಕರರ ಸೇವೆಯನ್ನು ಕಾಯಂ ಮಾಡಲು ಅವಕಾಶ ಇಲ್ಲ. ಅದಕ್ಕೆ ವಿರುದ್ಧವಾಗಿ ಹಿಂದಿನ ಸರ್ಕಾರ 1,657 ಗುತ್ತಿಗೆ ನೌಕರರ ಸೇವೆಯನ್ನು ಕಾಯಂ ಮಾಡುವ ತೀರ್ಮಾನವನ್ನು ಕೈಗೊಂಡಿತ್ತು. ಆದರೆ, ಇದರಿಂದ ಕಾನೂನು ತೊಡಕು ಎದುರಾಗುವುದು ಖಚಿತ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ' ಎಂದರು.

ರಾಜ್ಯ ಸರ್ಕಾರದ ಅಂಗ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ 1984ರ ನಂತರ ದುಡಿಯುತ್ತಿರುವ ಗುತ್ತಿಗೆ ನೌಕರರ ಸೇವೆ ಕಾಯಂ ಮಾಡುವಂತೆ ತೀವ್ರವಾದ ಒತ್ತಡವಿದೆ. ಆದರೆ, ಕಾನೂನಿನ ತೊಡಕಿನಿಂದಾಗಿ ಅದು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲೂ ಅಂತಹದೇ ಸಮಸ್ಯೆ ಇದೆ. `ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ಮಾಡುವ ನೇಮಕಾತಿಗಳು ಸಂವಿಧಾನಾತ್ಮಾಕ ನೇಮಕಾತಿ ನಿಯಮಗಳ ಅನುಸಾರವೇ ನಡೆಯಬೇಕು' ಎಂಬ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದ ತೀರ್ಮಾನವನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಇಲಾಖೆಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, `ಸಿ' ವೃಂದದ ಗುತ್ತಿಗೆ ನೌಕರರ ನೇಮಕಾತಿಯಲ್ಲೂ ಕಾನೂನು ಉಲ್ಲಂಘನೆ ನಡೆದಿರುವುದು ವೇದ್ಯವಾಗುತ್ತದೆ. ಹಲವು ನೌಕರರ ಸೇವೆಯನ್ನು ಬಾಹ್ಯಮೂಲದಿಂದ ಪಡೆಯಲಾಗಿದ್ದು, ನೇಮಕಾತಿಯಲ್ಲಿ ಸಂಸ್ಥೆಗಳಿಗೂ ನೌಕರರಿಗೂ ನೇರವಾದ ಸಂಬಂಧ ಇಲ್ಲ. ಇಂತಹ ನೌಕರರ ಸೇವೆಯನ್ನು ನೇರವಾದ ಗುತ್ತಿಗೆ ಆಧಾರದ ಸೇವೆ ಎಂದು ಪರಿಗಣಿಸುವುದಕ್ಕೂ ಅವಕಾಶ ಇಲ್ಲ ಎಂದರು.

ಗುತ್ತಿಗೆ ನೌಕರರ ಸೇವೆ ಕಾಯಂ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ಹಿಂದೆಯೂ ನೀಡಿದ್ದರು. ಆದರೆ, ಈ ನೌಕರರ ಸೇವೆಯನ್ನು ಕಾಯಂ ಮಾಡಲು ಹಿಂದಿನ ಸರ್ಕಾರ 2013ರ ಜನವರಿ 31ರಂದು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು. ಇದನ್ನು ಈಗ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ನಿರ್ಣಯ ಮಾಡಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.