ADVERTISEMENT

168 ಕೋಟಿ ಲಂಚ ಪಡೆದ ಎಚ್ ಡಿಕೆ : ಸಿ.ಎಂ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 13:30 IST
Last Updated 20 ಮಾರ್ಚ್ 2011, 13:30 IST

 ಬೆಂಗಳೂರು (ಪಿಟಿಐ): ರಾಜ್ಯ ಜೆಡಿಎಸ್ ಅಧ್ಯಕ್ಷ  ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕುಟುಂಬದ ಸದಸ್ಯರಿಗೆ ಅಧಿಕ ಸಂಖ್ಯೆಯಲ್ಲಿ ನಿವೇಶನ ಮಂಜೂರು ಮಾಡಿದ್ದಾರೆ. ಜೊತೆಗೆ ಗಣಿ ಉದ್ಯಮಿಗಳಿಂದ ದೊಡ್ಡ ಪ್ರಮಾಣದಲ್ಲಿ ಲಂಚ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಇಲ್ಲಿ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಿದ್ದಾಗ ತಮ್ಮ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್ ಗಾಗಿ 250 ಕೋಟಿ ರೂಪಾಯಿ ದೇಣಿಗೆ ಮತ್ತು ಗಣಿ ಉದ್ಯಮಿಗಳಿಂದ 168 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬುದು ಯಡಿಯೂರಪ್ಪ ಅವರ ಆಪಾದನೆ.

ತಮ್ಮ ಅಧಿಕಾರದ ಅವಧಿಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು  ಅಕ್ರಮವಾಗಿ ತಮ್ಮ ಕುಟುಂಬದ ಸದಸ್ಯರಿಗೆ 146 ನಿವೇಶನಗಳನ್ನು  ಸಹ ಮಂಜೂರು ಮಾಡಿದ್ದಾರೆ. ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಜೊತೆಗೂಡಿ 20 ತಿಂಗಳು ಸರ್ಕಾರ ನಡೆಸಿದ್ದಾಗ, ಕುಮಾರಸ್ವಾಮಿ ಕುಟುಂಬವು ಅಧಿಕಾರದ ಫಲ ಸವಿದಿದೆ. ಈಗ ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಅವರು ದೂರಿದ್ದಾರೆ.

ADVERTISEMENT

 ಭದ್ರಾ ಮೇಲ್ದಂಡೆ ಏತ ನೀರಾವರಿ ಕಾಮಗಾರಿಯನ್ನು ಸಂಸ್ಥೆಯೊಂದಕ್ಕೆ 1,032 ಕೋಟಿ ರೂಪಾಯಿ ಗುತ್ತಿಗೆಗೆ  ನೀಡಿ, ಪ್ರತಿಯಾಗಿ ಆ ಸಂಸ್ಥೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು  ತಮ್ಮ ಮಕ್ಕಳು ನಡೆಸುತ್ತಿರುವ ಎರಡು ಕಂಪೆನಿಗಳಿಗೆ 13 ಕೋಟಿ ರೂಪಾಯಿ ಪ್ರತಿಫಲ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಂಸದ ಎಚ್.ಡಿ ಕುಮಾರಸ್ವಾಮಿ ಅವರು ಶನಿವಾರ ಆರೋಪಿಸಿದ್ದರು.

ಕರ್ನಾಟಕ ನೀರಾವರಿ ನಿಗಮದ  ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು,  ಅಧಿಕಾರ ದುರುಪಯೋಗಮಾಡಿ, 550 ಕೋಟಿ ರೂಪಾಯಿಯ ವೆಚ್ಚದ ಆ ಕಾಮಗಾರಿಯ ಅಂದಾಜು ವೆಚ್ಚವನ್ನು 1032 ಕೋಟಿಗೆ ಹೆಚ್ಚಿಸಿ,  ಸಂಸ್ಥೆಗೆ ಮುಂಗಡವಾಗಿ 103 ಕೋಟಿ ರೂಪಾಯಿ ಮಂಜೂರು ಮಾಡಲು ಸಹ ಅನುಮೋದನೆ ನೀಡಿದ್ದರು ಎಂದು ಆರೋಪಿಸಿದ ಕುಮಾರಸ್ವಾಮಿ  ಅವರು ಆ ಸಂಬಂಧದ ದಾಖಲೆಗಳನ್ನು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.